ADVERTISEMENT

ಮೇಲ್ಸೇತುವೆ: ಪ್ರಮಾಣ ಪತ್ರ ನೀಡಿ

ಜುಲೈ 15ವರೆಗೆ ಸಂಸದ ನಳಿನ್‌ ಗಡುವು

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 15:49 IST
Last Updated 5 ಜುಲೈ 2018, 15:49 IST

ಉಳ್ಳಾಲ: ಜನವರಿಯೊಳಗೆ ತೊಕ್ಕೊಟ್ಟು ಮತ್ತು ಪಂಪ್‍ವೆಲ್ ಮೇಲುಸೇತುವೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಇದೇ 15ರ ಒಳಗೆ ಜಿಲ್ಲಾಡಳಿತ ಮತ್ತು ಸಂಸದರಿಗೆ ಪ್ರಮಾಣಪತ್ರದ (ಅಫಿದವಿತ್) ಮೂಲಕ ಭರವಸೆ ನೀಡಬೇಕು. ಇಲ್ಲದಿದ್ದರೆ ತಲಪಾಡಿಯಲ್ಲಿ ಟೋಲ್ ಸಂಗ್ರಹ ನಡೆಸಲು ತಡೆಯೊಡ್ಡಿ ಬಂದ್ ನಡೆಸುತ್ತೇವೆ’ ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ.

ತೊಕ್ಕೊಟ್ಟು, ತಲಪಾಡಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೀಕ್ಷಣೆಗೆ ಎನ್‍ಎಚ್‍ಎಐ ಮತ್ತು ನವಯುಗ ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳೊಂದಿಗೆ ಗುರುವಾರ ಭೇಟಿ ನೀಡಿ ಮಾತನಾಡಿದರು. ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಡಿಸೆಂಬರ್ ಅಂತ್ಯಕ್ಕೆ ಹಾಗೂ ಪಂಪ್‍ವೆಲ್ ಮೇಲ್ಸೇತುವೆ ಕಾಮಗಾರಿಯನ್ನು 2019 ಜನವರಿ ಅಂತ್ಯಕ್ಕೆ ಮುಕ್ತಾಯಗೊಳಿಸಬೇಕು. ಈ ಬಗ್ಗೆ ನನಗೆ ಹಾಗೂ ಜಿಲ್ಲಾಡಳಿತಕ್ಕೆ ಲಿಖಿತವಾಗಿ ಅಫಿದವಿತ್ ಮೂಲಕ ಬರೆದುಕೊಡಬೇಕು. ಜುಲೈ 15ರೊಳಗೆ ಕಾಮಗಾರಿ ಮುಕ್ತಾಯಗೊಳ್ಳುವ ಬಗ್ಗೆ ಅಧಿಕೃತವಾಗಿ ತಿಳಿಸದಿದ್ದರೆ, ಇದೇ 6ರಿಂದ ತಲಪಾಡಿ ಟೋಲ್‍ಗೇಟ್ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ತೊಕ್ಕೊಟ್ಟು ಮತ್ತು ಪಂಪ್‍ವೆಲ್‍ನಲ್ಲಿ ಮೇಲುಸೇತುವೆ ಕಾಮಗಾರಿ ಆರಂಭಗೊಂಡು 8 ವರ್ಷ ಕಳೆದಿದೆ. ನಾನಾ ಕಾರಣಗಳಿಗೆ ಈಗಾಗಲೇ ಗುತ್ತಿಗೆ ಸಂಸ್ಥೆಗೆ ಸಾಕಷ್ಟು ಕಾಲಾವಕಾಶವನ್ನು ನೀಡಲಾಗಿದೆ. ಆದರೂ ಕಾಮಗಾರಿ ಮುಗಿದಿಲ್ಲ. ಚರಂಡಿ, ಸರ್ವೀಸ್ ರಸ್ತೆ ಕಾಮಗಾರಿಯನ್ನು ಸರಿಯಾಗಿ ನಡೆಸದ ಬಗ್ಗೆ ಜನರಿಂದ ಆರೋಪಗಳು ಕೇಳಿಬರುತ್ತಿದೆ.ವಿಳಂಬವಾಗಲು ಅವಕಾಶ ನೀಡುವುದಿಲ್ಲ ಎಂದರು.

‘ ಎರಡು ಕಡೆಗಳಲ್ಲಿ ಮೇಲ್ಸೇತುವೆ ಪೂರ್ಣಗೊಳ್ಳುವವರೆಗೆ ಸ್ಥಳೀಯ ವಾಹನಗಳಿಗೆ ಟೋಲ್‍ನಿಂದ ವಿನಾಯಿತಿ ನೀಡಬೇಕು’ ಎಂದು ಟೋಲ್ ಸಂಗ್ರಹ ಕೇಂದ್ರಕ್ಕೆ ಭೇಟಿ ನೀಡಿದ ಸಂಸದ ನಳಿನ್ ಕುಮಾರ್ ಅವರು ಗುತ್ತಿಗೆ ಸಂಸ್ಥೆಯ ಯೋಜನಾ ನಿರ್ದೇಶಕ ಶಂಕರ್ ಅವರಿಗೆ ಸೂಚನೆ ನೀಡಿದರು. ತಲಪಾಡಿ ಸರ್ವೀಸ್ ರಸ್ತೆ ರಚನೆ, ಕಾಲುದಾರಿಗೆ ಅವಕಾಶ , ಉಚ್ಚಿಲದಲ್ಲಿ ಸರ್ವೀಸ್ ರಸ್ತೆ , ಚರಂಡಿಯ ಹೂಳೆತ್ತುವಿಕೆ ನಡೆಸುವಂತೆ ಗುತ್ತಿಗೆ ಸಂಸ್ಥೆಯ ಮುಖ್ಯ ಎಂಜಿನಿಯರ್ ರವಿ ಕುಮಾರ್‍ಗೆ ಹೇಳಿದರು.
ಎನ್‍ಎಚ್‍ಎಐ ಅಧಿಕಾರಿ ಅಜಿತ್, ಮುಖಂಡರಾದ ಸಂತೋಷ್ ಬೋಳಿಯಾರ್, ಸತೀಶ್ ಕುಂಪಲ, ಲಲಿತಾ ಸುಂದರ್ ತೊಕ್ಕೊಟ್ಟು ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.