ADVERTISEMENT

ಎಂಎಸ್‌ಪಿಗೆ ಭತ್ತ ಬೆಳೆಗಾರರ ನಿರಾಸಕ್ತಿ

ಸಂಧ್ಯಾ ಹೆಗಡೆ
Published 9 ನವೆಂಬರ್ 2025, 5:15 IST
Last Updated 9 ನವೆಂಬರ್ 2025, 5:15 IST
ಕೊಯ್ಲು ಮಾಡಿದ ಭತ್ತವನ್ನು ಗದ್ದೆಯಲ್ಲಿ ಒಣ ಹಾಕಿರುವುದು
ಕೊಯ್ಲು ಮಾಡಿದ ಭತ್ತವನ್ನು ಗದ್ದೆಯಲ್ಲಿ ಒಣ ಹಾಕಿರುವುದು   

ಮಂಗಳೂರು: ಕನಿಷ್ಠ ಬೆಂಬಲ ಬೆಲೆಯಡಿ ಭತ್ತ ಖರೀದಿಸಲು ಸರ್ಕಾರ ಪ್ರಾರಂಭಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಏಳು ಹಾಗೂ ಉಡುಪಿ ಜಿಲ್ಲೆಯ ಮೂರು ಭತ್ತ ಖರೀದಿ ಕೇಂದ್ರಗಳಲ್ಲಿ ಈವರೆಗೆ ಒಬ್ಬ ರೈತನೂ ಹೆಸರು ನೋಂದಾಯಿಸಿಲ್ಲ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನ ಶಕ್ತಿನಗರದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್‌ಸಿಎಸ್‌ಸಿ) ಗೋದಾಮು, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಾಲ್ಲೂಕುಗಳಲ್ಲಿ ಇರುವ ಕೆಎಫ್‌ಸಿಎಸ್‌ಸಿ ಗೋದಾಮಿನಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಉಡುಪಿ ಎಪಿಎಂಸಿ ಆವರಣ, ಕುಂದಾಪುರ ಕೋಟೇಶ್ವರದ ಕೆಎಫ್‌ಸಿಎಸ್‌ಸಿ ಗೋದಾಮು ಹಾಗೂ ಕಾರ್ಕಳದ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರಗಳು ಇವೆ.

ADVERTISEMENT

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹2,369, ‘ಎ’ ಗ್ರೇಡ್ ಭತ್ತಕ್ಕೆ ₹2,389 ದರವನ್ನು ಸರ್ಕಾರ ನಿಗದಿಪಡಿಸಿದೆ. ಸೆಪ್ಟೆಂಬರ್ 15ರಿಂದ ಅಕ್ಟೋಬರ್ 31ರವರೆಗೆ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಅಕ್ಟೋಬರ್ 17ರಿಂದ ಖರೀದಿ ಕೇಂದ್ರ ತೆರೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ನೋಂದಣಿ ಹೇಗೆ: ರೈತರು ತಮ್ಮ ಫ್ರುಟ್ಸ್ ಗುರುತಿನ ಸಂಖ್ಯೆ ಮೂಲಕ ಬೆಂಬಲ ಬೆಲೆಯಡಿ ಭತ್ತ ನೀಡಲು ಹೆಸರು ನೋಂದಾಯಿಸಬೇಕು. ಖರೀದಿ ಕೇಂದ್ರ ನೀಡುವ ದಿನಾಂಕದಂದು ಗೋಣಿಚೀಲದಲ್ಲಿ ಭತ್ತವನ್ನು ತರಬೇಕು. ಗುಣಮಟ್ಟ ಪರಿಶೀಲಿಸಿ, ಗ್ರೇಡ್ ಅನ್ನು ನಿಗದಿಪಡಿಸಲಾಗುತ್ತದೆ. ಖರೀದಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಅವರ ಖಾತೆಗೆ ಹಣ ಜಮಾ ಆಗುತ್ತದೆ. 2023ರಲ್ಲಿ ಕನಿಷ್ಠ ಬೆಂಬಲ ಬೆಲೆಯ ಜೊತೆಗೆ ಪ್ರತಿ ಕ್ವಿಂಟಲ್‌ಗೆ ₹500 ಪ್ರೋತ್ಸಾಹಧನ ನೀಡಲಾಗಿತ್ತು. ಆಗ ಕೆಲವರು ಮಾರಾಟ ಮಾಡಿದ್ದರು. ಕಳೆದ ವರ್ಷವೂ ಒಬ್ಬ ರೈತನೂ ನೋಂದಣಿ ಮಾಡಿರಲಿಲ್ಲ ಎಂದು ಅವರು ವಿವರಿಸಿದರು.

‘ಯಂತ್ರದ ಮೂಲಕ ಭತ್ತದ ಗದ್ದೆ ಕೊಯ್ಲು ಮಾಡಿಸಿದ್ದೇನೆ. ಮಳೆ ಇದ್ದ ಕಾರಣ ಬೈಹುಲ್ಲು ಹಾಳಾಯಿತು. ಕರಾವಳಿ ಭಾಗದಲ್ಲಿ ಭತ್ತ ಮಾರಾಟ ಮಾಡುವುದಿದ್ದರೆ ಮಿಲ್‌ನವರಿಗೆ ಕೊಡಬೇಕು. ನಾವು ಅಕ್ಕಿ ಮಾಡಿಸಿ ಮಾರಾಟ ಮಾಡುವುದರಿಂದ ಬೆಂಬಲ ಬೆಲೆ ಯೋಜನೆ ಬಗ್ಗೆ ಯೋಚಿಸಿಲ್ಲ. ಕನಿಷ್ಠ ಬೆಂಬಲ ಬೆಲೆ ಕ್ವಿಂಟಲ್‌ಗೆ ₹3,000 ದೊರೆತರೆ ಮಾತ್ರ ರೈತರಿಗೆ ಅನುಕೂಲ’ ಎನ್ನುತ್ತಾರೆ ಮಣಿಪಾಲದ ಶಿವರಾಂ ಭಟ್.

ಬೆಂಬಲ ಬೆಲೆ ಕಡಿಮೆ:

‘ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಕ್ವಿಂಟಲ್‌ಗೆ ₹2400ರಿಂದ ₹2500ರವರೆಗೆ ನಡೆಯುತ್ತಿದೆ. ಮಾರ್ಕೆಟ್‌ ದರ ಹೆಚ್ಚಿರುವಾಗ ಬೆಂಬಲ ಬೆಲೆಯಡಿ ಮಾರಾಟಕ್ಕೆ ರೈತರು ಆಸಕ್ತಿ ತೋರುವುದಿಲ್ಲ. ಬೆಂಬಲ ಬೆಲೆ ಯೋಜನೆ ದೊಡ್ಡ ರೈತರಿಗೆ ಅನುಕೂಲ. ಸಣ್ಣ ಹಿಡುವಳಿದಾರರಿಗೆ ಅಷ್ಟು ಉಪಯುಕ್ತ ಆಗದು. ಅಲ್ಲದೆ ಕುಚ್ಚಲಕ್ಕಿ ಬೆಳೆಯುವ ದಕ್ಷಿಣ ಕನ್ನಡ ಜಿಲ್ಲೆಗೆ ಇದು ಪ್ರಯೋಜನವಿಲ್ಲ’ ಎನ್ನುತ್ತಾರೆ ಅಳಿಕೆಯ ಕೃಷಿಕ ಶಿವಪ್ರಸಾದ್.

ಎಂಎಸ್‌ಪಿ ಬಗ್ಗೆ ಹಲವಾರು ರೈತರು ಖರೀದಿ ಕೇಂದ್ರಕ್ಕೆ ಬಂದು ವಿಚಾರಿಸಿದ್ದಾರೆ. ನೋಂದಣಿ ದಿನಾಂಕ ವಿಸ್ತರಣೆಗೆ ಸರ್ಕಾರವನ್ನು ವಿನಂತಿಸಲು ಯೋಚಿಸಲಾಗಿದೆ.
ಶರತ್‌ಕುಮಾರ್, ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.