ADVERTISEMENT

ಕೊಯಿಲ | ಸದಸ್ಯರಿಗೆ ಪಕ್ಷಕ್ಕಿಂತ ಪಂಚಾಯಿತಿಯೇ ಮುಖ್ಯ: ಮಂಜುನಾಥ ಭಂಡಾರಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:22 IST
Last Updated 20 ಜನವರಿ 2026, 2:22 IST
ಕಡಬ ತಾಲ್ಲೂಕು ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರೊಂದಿಗೆ ಮಂಜುನಾಥ ಭಂಡಾರಿ ಸಂವಾದ ನಡೆಸಿದರು
ಕಡಬ ತಾಲ್ಲೂಕು ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರೊಂದಿಗೆ ಮಂಜುನಾಥ ಭಂಡಾರಿ ಸಂವಾದ ನಡೆಸಿದರು   

ಕೊಯಿಲ (ಉಪ್ಪಿನಂಗಡಿ): ಗ್ರಾಮ ಪಂಚಾಯಿತಿ ಸದಸ್ಯರಾದವರಿಗೆ ಪಕ್ಷ ಮುಖ್ಯವೇ ಅಲ್ಲ. ಹಳ್ಳಿ, ವಾರ್ಡ್‌, ಗ್ರಾಮ ಪಂಚಾಯಿತಿ ಮಾತ್ರ ಮುಖ್ಯವಾಗಿರಬೇಕು. ಹಾಗಾದಾಗ ಮಾತ್ರ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಕಡಬ ತಾಲ್ಲೂಕು ಕೊಯಿಲ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರೊಂದಿಗೆ ಅವರು ಸೋಮವಾರ ‌ಸಂವಾದ ನಡೆಸಿದರು.

ಪಂಚಾಯಿತಿಗೆ ಸಂಪನ್ಮೂಲಗಳನ್ನು ಕ್ರೋಡೀಕರಿಸುವಂತಾಗಬೇಕು. ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಇದ್ದರೆ ಅದನ್ನು ಪಂಚಾಯಿತಿ ಹೆಸರಿಗೆ ಪಹಣಿ ಪತ್ರ ಮಾಡಿಕೊಂಡರೆ, ಸರ್ಕಾರದಿಂದ ಪಶು ಚಿಕಿತ್ಸಾಲಯ, ವಾಚನಾಲಯ, ಅಂಬೇಡ್ಕರ್ ಭವನ, ಸಭಾ ಭವನಗಳನ್ನು ಸುಲಭದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಈ ಬಗ್ಗೆ ಸದಸ್ಯರು ಚಿಂತನೆ ನಡೆಸಬೇಕು ಎಂದರು.

ADVERTISEMENT

ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರ ಜಾಗ ಇದ್ದರೆ ಅದನ್ನು ಪಂಚಾಯಿತಿಗೆ ಮಂಜೂರು ಮಾಡಬೇಕು ಎಂದು ಸಭೆಯಲ್ಲಿದ್ದ ತಹಶೀಲ್ದಾರ್‌ಗೆ ಸೂಚನೆ ನೀಡಿದರು. ಇಂಥ ಜಾಗ ಈಗಾಗಲೇ ಪಂಚಾಯಿತಿ ವಶದಲ್ಲಿ ಇದ್ದರೆ ಅದನ್ನು ಉಪಯೋಗಿಸುವ ಸಂಬಂಧ ಯೋಜನೆ ರೂಪಿಸಬೇಕು ಎಂದು ಪಿಡಿಒ ಮತ್ತು ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು.

ನೀರಿನ ಟ್ಯಾಂಕ್ ಬೇಕು: ಕೊಯಿಲ ಜನತಾ ಕಾಲೊನಿ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್‌ ಕೆಡವಲಾಗಿದ್ದು, ಇದೀಗ ನೀರು ಸರಬರಾಜಿಗೆ ಸಮಸ್ಯೆ ಉಂಟಾಗಿದೆ. ಹೊಸ ಟ್ಯಾಂಕ್ ನಿರ್ಮಾಣವಾಗಬೇಕಿದ್ದು, ಅನುದಾನ ಮಂಜೂರು ಮಾಡುವಂತೆ ಸದಸ್ಯ ನಝೀರ್ ಪೂರಿಂಗ ಹೇಳಿದರು.

ಮಂಜುನಾಥ ಭಂಡಾರಿ ಪ್ರತಿಕ್ರಿಯಿಸಿ, ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸಿ, ಅದರ ಪ್ರತಿಯನ್ನು ನನಗೂ ಕಳುಹಿಸಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಕಡಬ ತಹಶೀಲ್ದಾರ್ ಪ್ರಭಾಕರ ಕಜೂರೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್, ಗ್ರಾಮ ಲೆಕ್ಕಾಧಿಕಾರಿ ಗಾಯತ್ರಿ, ಪಂಚಾಯಿತಿ ಉಪಾಧ್ಯಕ್ಷ ಯತೀಶ್, ಸದಸ್ಯರಾದ ಚಿದಾನಂದ, ಜಮೀಳ ಇಕ್ಬಾಲ್, ಸಫೀಯ ಮಾತನಾಡಿದರು.

ಕೆಪಿಸಿಸಿ ಸಂಯೋಜಕ ಜಿ.ಕೃಷ್ಣಪ್ಪ ರಾಮಕುಂಜ, ಪ್ರಮುಖರಾದ ಪಿ.ಪಿ.ವರ್ಗೀಸ್‌, ಸರ್ವೋತ್ತಮ ಗೌಡ, ಅಕ್ರಮ ಸಕ್ರಮ ಸಮಿತಿ ಸದಸ್ಯ ಆದಂ ಎಚ್., ತಾಲ್ಲೂಕು ಕೆಡಿಪಿ ಸದಸ್ಯ ಮೋನಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಉಷಾ ಅಂಚನ್, ಎ.ಕೆ.ಬಶೀರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಹೇಮಾ, ಸಲೀಕತ್ ಭಾಗವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂದೇಶ್ ಸ್ವಾಗತಿಸಿ, ಕಾರ್ಯದರ್ಶಿ ಅಮ್ಮು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.