ADVERTISEMENT

ಉಜಿರೆಯಲ್ಲಿ ಸಂಚಾರವೇ ಸಮಸ್ಯೆ

ಕಿರಿದಾದ ರಸ್ತೆ, ಅನಧಿಕೃತ ಅಂಗಡಿಗಳು

ಆರ್.ಎನ್.ಪೂವಣಿ
Published 6 ನವೆಂಬರ್ 2020, 4:17 IST
Last Updated 6 ನವೆಂಬರ್ 2020, 4:17 IST
ಉಜಿರೆ ಸಮೀಪದ ಗ್ರಾಮೀಣ ರಸ್ತೆಯ ದುಃಸ್ಥಿತಿ
ಉಜಿರೆ ಸಮೀಪದ ಗ್ರಾಮೀಣ ರಸ್ತೆಯ ದುಃಸ್ಥಿತಿ   

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರವೇಶದ್ವಾರದಂತಿರುವ ಉಜಿರೆಯಲ್ಲಿ ರಸ್ತೆ, ವಾಹನ ನಿಲುಗಡೆಗೆ ಸ್ಥಳಾವಕಾಶ ಕೊರತೆ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.

ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪರಿಚಿತವಾದ ಉಜಿರೆಯು ಸುರ್ಯ ಸದಾಶಿವ ರುದ್ರ ದೇವಸ್ಥಾನ, ಮುಂಡಾಜೆ, ಬೆಳಾಲು, ಸೌತಡ್ಕ, ಕನ್ಯಾಡಿ ರಾಮಕ್ಷೇತ್ರ ಮೊದಲಾದ ಪ್ರವಾಸಿ ತಾಣಗಳಿಗೂ ಸಂಪರ್ಕ ಕಲ್ಪಿಸುವ ಕೇಂದ್ರ. ಚರಂಡಿ ಇಲ್ಲದ ರಸ್ತೆಗಳು, ರಸ್ತೆ ಬದಿಯಲ್ಲಿ ಅನಧಿಕೃತ ವ್ಯಾಪಾರಿಗಳ ತಾತ್ಕಾಲಿಕ ಅಂಗಡಿಗಳು, ಅನಧಿಕೃತ ವಾಣಿಜ್ಯ ಸಂಕೀರ್ಣ, ವಾಹನಗಳ ಪಾರ್ಕಿಂಗ್ ಸಮಸ್ಯೆ ಇಲ್ಲಿ ಕಿರಿಕಿರಿ ಸೃಷ್ಟಿಸುತ್ತಿದೆ.

ಹಳೆ ಪೇಟೆಯಲ್ಲಿ ಕಡಿದಾದ ತಿರುವುಗಳು ಹಾಗೂ ಕಿರಿದಾದ ರಸ್ತೆ, ಶಾಲೆಯ ಬಳಿ ಇರುವ ರಸ್ತೆಗೆ ಚರಂಡಿ ವ್ಯವಸ್ಥೆಯಿಲ್ಲದೆ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗಿ ಸಂಚಾರಕ್ಕೆ ಅಡಚಣೆಯಾಗುತ್ತದೆ. ಪಜಿರಡ್ಕ, ಕನ್ಯಾಡಿ, ಮುಂಡಾಜೆ ಸುರ್ಯ, ಬೆಳಾಲು ಮೊದಲಾದ ಗ್ರಾಮೀಣ ಪ್ರದೇಶದ ರಸ್ತೆಗಳು ಡಾಂಬರೀಕರಣ ವಾಗದೆ ಹಲವು ವರ್ಷಗಳೇ ಸಂದಿವೆ. ಡಾಂಬರೀಕರಣವಾದ ರಸ್ತೆಗಳಲ್ಲಿ ಸಹ ಕಳಪೆ ಕಾಮಗಾರಿಯಿಂದಾಗಿ ಜಲ್ಲಿಕಲ್ಲಿನ ಹರಳುಗಳು ಮಾತ್ರ ಗೋಚರಿಸುತ್ತವೆ. ಕಾಶಿಬೆಟ್ಟು, ಯೆರ್ನೋಡಿ, ಉಜಿರೆ ಬಸ್ ನಿಲ್ದಾಣ, ಬೆಳಾಲು ಕ್ರಾಸ್‌ ಮೊದಲಾದವು ಅವಘಡ ವಲಯಗಳಾಗುತ್ತವೆ. ಇಲ್ಲಿ ವರ್ಷಕ್ಕೆ ನಾಲ್ಕೈದು ಅಪಘಾತಗಳು ಸಂಭವಿಸುತ್ತವೆ. ಗ್ರಾಮೀಣ ರಸ್ತೆಗಳ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ADVERTISEMENT

ಪಾರ್ಕಿಂಗ್ ಅವ್ಯವಸ್ಥೆಯನ್ನು ಶೀಘ್ರ ಸರಿಪಡಿಸುವುದಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ತಿಳಿಸಿದ್ದಾರೆ.

****

ಉಜಿರೆ ಬಸ್ ನಿಲ್ದಾಣದಲ್ಲಿರುವ ವೃತ್ತ ಅವೈಜ್ಞಾನಿಕವಾಗಿದ್ದು ಹೊಸ ವೃತ್ತ ನಿರ್ಮಿಸಲಾಗುವುದು. ಉಜಿರೆಯಿಂದ ಗುರುವಾಯನಕೆರೆವರೆಗೆ ಬೈಪಾಸ್ ರಸ್ತೆ ನಿರ್ಮಿಸಲಾಗುವುದು.
-ಹರೀಶ್ ಪೂಂಜ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.