ADVERTISEMENT

ಬಸ್‌ಗಳಿಗೆ ಟೋಲ್‌, ಪ್ರಯಾಣಿಕರಿಗೆ ತೊಂದರೆ: ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 11:15 IST
Last Updated 3 ಮಾರ್ಚ್ 2021, 11:15 IST
   


ಉಳ್ಳಾಲ: ತಲಪಾಡಿ ರೂಟ್‌ ಬಸ್‌ಗಳು ತಲಪಾಡಿ ಬಸ್ ನಿಲ್ದಾಣಕ್ಕೆ ತೆರಳದೇ, ಪ್ರಯಾಣಿಕರು ಒಂದು ಕಿ.ಮೀ ನಡೆದುಕೊಂಡು ಹೋಗಬೇಕಾಗಿದೆ. ಇದನ್ನು ಖಂಡಿಸಿ ಟೋಲ್ ಗೇಟ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಸಿಟಿ ಬಸ್ ಮಾಲೀಕರ ವಿರುದ್ಧ ತಲಪಾಡಿ ನಾಗರಿಕರು ಮತ್ತು ಕೇರಳದಿಂದ ಬರುವ ಪ್ರಯಾಣಿಕರು ಬುಧವಾರ ಇಲ್ಲಿನ ತಲಪಾಡಿ ಟೋಲ್‌ಗೇಟ್‌ ಬಳಿ ಮಾನವ ಸರಪಳಿ ರಚಿಸಿ, ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಯ ನಾಯ್ಕ್ ಮಾತನಾಡಿ, ‘ಟೋಲ್ ನಿರ್ಮಿಸುವ ಸಂದರ್ಭ ಗ್ರಾಮದ ಜನರಲ್ಲಿದ್ದ 8 ಎಕರೆ ಪ್ರದೇಶವನ್ನು ಸೆಂಟ್ಸ್‌ಗೆ ₹12ಸಾವಿರದಂತೆ ಖರೀದಿಸಿದ್ದರು. ಅದರ ಜೊತೆಗೆ ಸರ್ಕಾರಿ ಜಾಗವನ್ನು ಗುಳುಂ ಮಾಡಿದರು. ಇದೀಗ ಗ್ರಾಮದ ಜನರಿಗೆ ಇರುವ ಬಸ್ ವ್ಯವಸ್ಥೆಗೆ ಅಡ್ಡಿಯುಂಟು ಮಾಡುತ್ತಿದ್ದಾರೆ’ ಎಂದು ದೂರಿದರು.

ಸಾಮಾನ್ಯ ಜನ ಟೋಲ್ ಎದುರು ನಿಂತರೆ ಬೊಬ್ಬಿಡುವ ಸಿಬ್ಬಂದಿ, ಒಂದು ವರ್ಷದಿಂದ ಸಿಟಿ ಬಸ್‌ಗಳು ಎದುರಲ್ಲೇ ನಿಂತರೂ ಮಾತನಾಡುತ್ತಿಲ್ಲ. ಟೋಲ್ ಸಿಬ್ಬಂದಿ ಇದರ ಜತೆಗೆ ಕೈಜೋಡಿಸಿದ್ದಾರೆ. ಜಿಲ್ಲಾಡಳಿತ ತಕ್ಷಣ ತಲಪಾಡಿ ಗ್ರಾಮದ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯೆ ಸುರೇಖಾ ಚಂದ್ರಹಾಸ್ ಮಾತನಾಡಿ, ‘ವಿದ್ಯಾರ್ಥಿಗಳು, ವೃದ್ಧರು ಸುಡುಬಿಸಿಲಿನಲ್ಲಿ ನಡೆದುಕೊಂಡು ಸಾಗುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಗ್ರಾಮದ ನೆಲ, ನೀರು ಎಲ್ಲಾ ಕೊಟ್ಟರೂ, ಜನರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿರುವುದು ಬಹಳ ಖೇದಕರ. ಇದು ಮುಂದುವರಿದಲ್ಲಿ ಉಗ್ರ ರೀತಿಯ ಹೋರಾಟಕ್ಕೆ ಅಣಿಯಾಗುತ್ತೇವೆ’ ಎಂದರು.
ಗಡಿನಾಡು ರಕ್ಷಣಾ ವೇದಿಕೆಯ ಸಿದ್ದೀಖ್ ತಲಪಾಡಿ, ‘ಗ್ರಾಮದ ಜನರ ತಾಳ್ಮೆಯನ್ನು ಟೋಲ್‌ನವರು ಪರೀಕ್ಷಿಸದರಿ. ತಾಳ್ಮೆ ಕೆಟ್ಟಲ್ಲಿ ಗ್ರಾಮದಲ್ಲಿ ಟೋಲ್ ಉಳಿಯಲು ಅಸಾಧ್ಯ. ಈ ಕೂಡಲೇ ಬಸ್‌ನವರ ಜತೆಗೆ ಮಾತುಕತೆ ನಡೆಸಿ ಜನರ ಕಷ್ಟಕ್ಕೆ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

ಟೋಲ್ ಎದುರು ಹಮ್ಮಿಕೊಂಡ ಪ್ರತಿಭಟನೆ ಬಳಿಕ ಸಿಟಿ ಬಸ್‌ ತಿರುಗುವ ಪ್ರದೇಶದಿಂದ ಟೋಲ್ ಎದುರುವರಿನವರೆಗೆ ಮಾನವ ಸರಪಳಿಯನ್ನು ನಿರ್ಮಿಸಲಾಯಿತು. ಬಳಿಕ ಟೋಲ್ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದ ಪ್ರತಿಭಟನಾಕಾರರು ಸಿಟಿ ಬಸ್‌ಗಳನ್ನು ಬಿಡುವಂತೆ ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಉಳ್ಳಾಲ ಠಾಣಾಧಿಕಾರಿ ಸಂದೀಪ್, ಪರಿಸ್ಥಿತಿಯನ್ನು ಹತೋಟಿಗೆ ತಂದರು. ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಬುಧವಾರ ದಿನವಿಡೀ ಸಿಟಿ ಬಸ್‌ಗಳನ್ನು ಟೋಲ್‌ನಲ್ಲಿ ಉಚಿತವಾಗಿ ಕಳುಹಿಸಲಾಯಿತು. ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಸಿದ್ದೀಖ್ ಕೊಳಂಗೆರೆ, ತಲಪಾಡಿ ಪಂಚಾಯಿತಿ ಸದಸ್ಯ ಇಸ್ಮಾಯಿಲ್ ಕೆ.ಸಿ ರೋಡ್, ಸಾಮಾಜಿಕ ಕಾರ್ಯಕರ್ತ ಯಶು ಪಕಳ ನೇತೃತ್ವ ವಹಿಸಿದ್ದರು.

‘ಪ್ರಸ್ತಾವ ಒಪ್ಪುತ್ತಿಲ್ಲ’
31 ಬಸ್‌ಗಳಿಗೆ ಮಾಸಿಕವಾಗಿ ₹2 ಲಕ್ಷ ಕೊಡುವುದಾಗಿ ತಲಪಾಡಿ ಬಸ್‌ ಮಾಲೀಕರ ಸಂಘ ಮನವಿ ಮಾಡಿತ್ತು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡು ಬಾರಿ ಸಭೆ ಸೇರಿದರೂ, ನವಯುಗ ಸಂಸ್ಥೆ ಪ್ರತಿಕ್ರಿಯಿಸಿಲ್ಲ. ಇದರಿಂದ ತಲಪಾಡಿ ಜನರ ತೊಂದರೆ ಮುಂದುವರಿದಿದೆ. ಮಿನಿ ಬಸ್‌ಗೆ ₹10ಸಾವಿರ, ದೊಡ್ಡ ಬಸ್‌ಗಳಿಗೆ ₹20ಸಾವಿರ ಬೇಡಿಕೆಯನ್ನು ನವಯುಗ ಸಂಸ್ಥೆ ಮುಂದಿಟ್ಟಿದೆ. ಆದರೆ ಅಷ್ಟೊಂದು ಹಣ ಪಾವತಿ ಕಷ್ಟ’ ಎಂದು ತಲಪಾಡಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಕರೀಂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.