ಮಂಗಳೂರು: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜ ಪಂಡಿತ್ ರಾಜನ್ ಮಿಶ್ರಾ ಸ್ಮರಣಾರ್ಥ ಅವರ ಶಿಷ್ಯಂದಿರಾದ ಗಾಯಕ ಪ್ರಭಾಕರ ಕಶ್ಯಪ್ ಹಾಗೂ ದಿವಾಕರ ಕಶ್ಯಪ್ ಅವರ ಸಂಗೀತ ಕಛೇರಿಯನ್ನು ಸ್ವರಾನಂದ ಪ್ರತಿಷ್ಠಾನ ವತಿಯಿಂದ ಇದೇ 30ರಂದು ಸಂಜೆ 5.30ರಿಂದ ಹಾಗೂ ಇದೇ 31 ರಂದು ಮುಂಜಾನೆ 6.30ರಿಂದ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರತಿಷ್ಠಾನದ ಅಧ್ಯಕ್ಷ ಭಾರವಿ ದೇರಾಜೆ, ‘ಶನಿವಾರ ಕಾರ್ಯಕ್ರಮದ ಆರಂಭದಲ್ಲಿ ಸೌರಬ್ ಗುಲವಾನಿ ಹಾಗೂ ಸಂದೀಪನ್ ಮುಖರ್ಜಿ ತಬಲಾ ಕಛೇರಿ ನೀಡಲಿದ್ದಾರೆ. ನಂತರ ನಿಶಾದ್ ವ್ಯಾಸ್ ಗಾಯನ ನಡೆಸಿಕೊಡಲಿದ್ದಾರೆ. ಅದಾದ ಬಳಿಕ ಕಶ್ಯಪ್ ಬಂಧುಗಳು ಗಾಯನ ಪ್ರಸ್ತುತಿ ಪಡಿಸುವರು. ಭಾನುವಾರ ಮುಂಜಾನೆ ಕಶ್ಯಪ್ ಬಂಧುಗಳು ರಾಗಗಳ ಪ್ರಸ್ತುತಿಯ ವಿಶೇಷ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ’ ಎಂದರು.
‘ಕಲಾವಿದರು ಹಾಗೂ ಶೋತೃಗಳ ನಡುವೆ ಸಂವಾದ ಬೆಳೆಸುವ ಬೈಠಕ್ ಮಾದರಿಯ ಸಂಗೀತ ಕಛೇರಿ ಇದಾಗಿರಲಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷರಾದ ಕವಿತಾ ಶೆಣೈ ಬಸ್ತಿ, ಕಾರ್ಯದರ್ಶಿ ದಾಮೋದರ ಹೆಗ್ಡೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.