ADVERTISEMENT

ಕಿರು ಹಣಕಾಸು ಸಾಲ ಮನ್ನಾಕ್ಕೆ ಆಗ್ರಹ

ಋಣಮುಕ್ತ ಕಾಯ್ದೆ ಜಾರಿಗೆ ಆಗ್ರಹಿಸಿ ಸಾವಿರಾರು ಮಂದಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 16:04 IST
Last Updated 28 ನವೆಂಬರ್ 2019, 16:04 IST
ದಕ್ಷಿಣ ಕನ್ನಡ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕಾರ್ಮಿಕ ಮುಖಂಡ ಬಿ.ಎಂ.ಭಟ್‌ ಮಾತನಾಡಿದರು.– ಪ್ರಜಾವಾಣಿ ಚಿತ್ರ
ದಕ್ಷಿಣ ಕನ್ನಡ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕಾರ್ಮಿಕ ಮುಖಂಡ ಬಿ.ಎಂ.ಭಟ್‌ ಮಾತನಾಡಿದರು.– ಪ್ರಜಾವಾಣಿ ಚಿತ್ರ   

ಮಂಗಳೂರು: ಕಿರು ಹಣಕಾಸು ಸಂಸ್ಥೆಗಳು ಬಡ ಜನರಿಗೆ ದುಬಾರಿ ಬಡ್ಡಿ ದರದಲ್ಲಿ ನೀಡಿರುವ ಸಾಲವನ್ನೂ ಋಣಮುಕ್ತ ಕಾಯ್ದೆಯಡಿ ಮನ್ನಾ ಮಾಡುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಸಾವಿರಾರು ಮಂದಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ನೆಹರೂ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿವಿಧ ಕಿರು ಹಣಕಾಸು ಸಂಸ್ಥೆಗಳ ಸಾಲಗಾರರು, ‘ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಬಡ್ಡಿದರ ವಸೂಲಿ ಮಾಡುತ್ತಿರುವ ಕಿರು ಹಣಕಾಸು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕರೂ ಆಗಿರುವ ಕಾರ್ಮಿಕ ಮುಖಂಡ ಬಿ.ಎಂ.ಭಟ್‌, ‘ಕಿರು ಹಣಕಾಸು ಸಂಸ್ಥೆಗಳ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಡವರ ಮನೆ ಬಾಗಿಲಿಗೆ ಬಂದು ಸಾಲ ನೀಡುವ ಈ ಸಂಸ್ಥೆಗಳು ನಂತರದ ದಿನಗಳಲ್ಲಿ ದೌರ್ಜನ್ಯಕ್ಕೆ ಇಳಿಯುತ್ತಿವೆ. ಆರ್‌ಬಿಐ ನಿಗದಿಪಡಿಸಿರುವ ಬಡ್ಡಿದರವನ್ನು ವಿಧಿಸದೇ, ಹಲವು ಪಟ್ಟು ಹೆಚ್ಚು ವಸೂಲಿ ಮಾಡುತ್ತಿವೆ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಈ ಸಂಸ್ಥೆಗಳ ಪರ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ದೌರ್ಜನ್ಯಕ್ಕೊಳಗಾದ ಜನರು ಈಗ ಸಂಘಟಿತರಾಗುತ್ತಿದ್ದಾರೆ. ಸಾವಿರಾರು ಮಂದಿ ಹೋರಾಟಕ್ಕೆ ಕೈಜೋಡಿಸುತ್ತಿದ್ದಾರೆ. ಕಿರು ಹಣಕಾಸು ಸಂಸ್ಥೆಗಳಿಂದ ತೊಂದರೆಗೊಳಗಾಗಿರುವ ಜನರ ಮಾಹಿತಿ ಸಂಗ್ರಹಿಸಲಾಗುತ್ತಿದೆ. 25,000 ಜನರ ಸಹಿಯೊಂದಿಗೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಕಿರು ಹಣಕಾಸು ಸಂಸ್ಥೆಗಳ ಉಪಟಳಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಲಾಗುವುದು. ನ್ಯಾಯಾಲಯ ಬಡವರ ‍ಪರ ನಿಲ್ಲುವ ವಿಶ್ವಾಸವಿದೆ ಎಂದರು.

ಆರ್ಥಿಕ ಹಿಂಜರಿತ ಪರಿಣಾಮವಾಗಿ ಜನರ ಬಳಿ ಹಣ ಇಲ್ಲ. ಬ್ಯಾಂಕ್‌ಗಳೂ ಸಾಲ ನೀಡುತ್ತಿಲ್ಲ. ಬಡ ಮಹಿಳೆಯರು ಜೀವನೋಪಾಯಕ್ಕಾಗಿ ಕಿರು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡು ಹಣಕಾಸು ಸಂಸ್ಥೆಗಳು ನಿರಂತರವಾಗಿ ಬಡ ಕುಟುಂಬಗಳ ಶೋಷಣೆ ಮಾಡುತ್ತಿವೆ. ಈ ಸಾಲವನ್ನೂ ಋಣಮುಕ್ತ ಕಾಯ್ದೆಯಡಿ ತರುವ ಮೂಲಕ ಬಡವರನ್ನು ಶೋಷಣೆಯಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.

ಕಾರ್ಮಿಕ ಮುಖಂಡ ಎಲ್.ಮಂಜುನಾಥ್ ಮಾತನಾಡಿ, ‘ಹಲವು ಖಾಸಗಿ ಹಣಕಾಸು ಸಂಸ್ಥೆಗಳು ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ದುಬಾರಿ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಕೈ ಸಾಲದ ಹೆಸರಿನಲ್ಲಿ ಬಡವರನ್ನು ಸುಲಿಗೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಇಂತಹ ಖಾಸಗಿ ಲೇವಾದೇವಿದಾರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ಮುಖಂಡರಾದ ನೆಬಿಸ ಬೆಳ್ತಂಗಡಿ, ನೇಮಿರಾಜ್ ಕಿಲ್ಲೂರು, ಎಂ.ಬಿ.ಸದಾಶಿವ, ಜಗದೀಶ್, ಅಶೋಕ್, ನವೀನ್ ಪುತ್ರನ್, ನಾಗರಾಜ್, ವಿನೋದ್, ಭರತ್, ಕೇಶವ ಗೌಡ, ಇಸ್ಮಾಯಿಲ್, ಕಿರಣಪ್ರಭ, ಸೇಸಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.