ADVERTISEMENT

ಕೊರಗ ಸಮುದಾಯದ ಮೊದಲ ಮಹಿಳಾ ಪಿಎಚ್‌ಡಿ ಪದವೀಧರೆ ಸಬಿತಾ ಕೊರಗ

ಶೈಕ್ಷಣಿಕ ಸಾಧನೆ ಮೆರೆದ ಸಬಿತಾ ಕೊರಗ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 2:42 IST
Last Updated 23 ಫೆಬ್ರುವರಿ 2022, 2:42 IST
ಸಬಿತಾ ಕೊರಗ
ಸಬಿತಾ ಕೊರಗ   

ಮುಡಿಪು: ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್‌, ಎನ್‌ಇಟಿ ಪರೀಕ್ಷೆಯನ್ನು ಪ್ರಥಮ ಯತ್ನದಲ್ಲೇ ತೇರ್ಗಡೆ ಹೊಂದಿ ಸಾಧನೆ ಮಾಡಿರುವ ಕೊರಗ ಸಮುದಾಯದ ಸಬಿತಾ ಕೊರಗ ಅವರು ಇದೀಗ ಪಿಎಚ್‌ಡಿ ಪಡೆದಿದ್ದಾರೆ. ಈ ಮೂಲಕ ಸಮುದಾಯದ ಮೊದಲ ಮಹಿಳಾ ಡಾಕ್ಟರೇಟ್‌ ಪದವೀಧರೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಉಡುಪಿ ಜಿಲ್ಲೆಯ ಸಾಸ್ತಾನ ಸಮೀಪದ ಗುಂಡ್ಮಿಯ ಸಬಿತಾ ಅವರು ಬಾಲ್ಯದಲ್ಲೇ ತಂದೆ–ತಾಯಿ ಕಳೆದುಕೊಂಡು ಬಡತನದ ಬೇಗುದಿಯಲ್ಲಿ ದೊಡ್ಡಮ್ಮನ ಆಶ್ರಯದೊಂದಿಗೆ ಬೆಳೆದಿದ್ದರು. ಶೈಕ್ಷಣಿಕವಾಗಿ ಸಾಧನೆ ಮಾಡುವ ಕನಸು ಹೊಂದಿದ್ದರು. ಇವರ ಓದಿಗೆ ಬಡತನ, ಆರ್ಥಿಕ,‌ ಸಾಮಾಜಿಕ ಸಂಕಷ್ಟಗಳು ಎದುರಾದರೂ ಅದನ್ನು ಸಮರ್ಥವಾಗಿ ಮೆಟ್ಟಿ‌ ನಿಂತು, ಸಾಧನೆಯ ಒಂದೊಂದೇ ಮೆಟ್ಟಿಲನ್ನೇರಿ ಕೊರಗ ಸಮು ದಾಯದ ಮಹಿಳೆಯಾಗಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯ ದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ನೇಮಕಗೊಂಡಿರುವ ಸಬಿತಾ ಕೊರಗ ಅವರಿಗೆ ಸಮಾಜಶಾಸ್ತ್ರ ವಿಭಾಗದಲ್ಲಿ ಪಿಎಚ್‌ಡಿಗೆ ಅವಕಾಶ ದೊರೆತಿತ್ತು. ಮಂಗಳೂರು ವಿವಿಯ ಸಮಾಜಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಜೋಗನ್ ಶಂಕರ್ ಮಾರ್ಗದರ್ಶನದಲ್ಲಿ ‘ಇವ್ಯಾಲ್ಯುವೇಷನ್ ಆಫ್ ಪಾಲಿಸೀಸ್ ಆಂಡ್ ಪ್ರೋಗ್ರಾಮ್ಸ್ ಆಫ್ ಟ್ರೈಬಲ್ ಡೆವಲಪ್‌ಮೆಂಟ್ ಆಫ್ ಕರ್ನಾಟಕ ಸ್ಟೇಟ್’ ಎಂಬ ವಿಷಯದಲ್ಲಿ ಮಂಗಳೂರು ವಿವಿಗೆ ಮಂಡಿಸಿದ ಪ್ರಬಂಧವನ್ನು ಪಿಎಚ್‌ಡಿಗೆ ಅಂಗೀಕರಿಸಲಾಗಿದೆ.

ADVERTISEMENT

‘ನಾವು ಯಾವುದೇ ಸಂಕಷ್ಟ ಸ್ಥಿತಿಯಲ್ಲಿದ್ದರೂ ಧನಾತ್ಮಕ ಚಿಂತನೆಯೊಂದಿಗೆ ಮುನ್ನಡೆದರೆ ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸು ಗಳಿಸಲು ಸಾಧ್ಯ. ನನ್ನ ಬಾಲ್ಯದಿಂದಲೂ ಬದುಕಿನಲ್ಲಿ ಸಂಕಷ್ಟವನ್ನು ಎದುರಿಸಿದ್ದೆ. ಇದೀಗ ಶೈಕ್ಷಣಿಕ ಸಾಧನೆಯಿಂದ ನಾನು ಕಂಡಿದ್ದ ಕನಸು ಈಡೇರಿದೆ. ಸಮುದಾಯದ ಏಳಿಗೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎನ್ನುತ್ತಾರೆ ಡಾ.ಸಬಿತಾ ಕೊರಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.