ADVERTISEMENT

ನವರಾತ್ರಿ ವೈಭವಕ್ಕೆ ಮೆರುಗು ತಂದ ’ಪಿಲಿ ಪರ್ಬ‘

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 14:29 IST
Last Updated 2 ಅಕ್ಟೋಬರ್ 2022, 14:29 IST
‘ಪಿಲಿ ಪರ್ಬ 2022’ ಹುಲಿ ವೇಷ ಸ್ಪರ್ಧಾ ಕೂಟವನ್ನು ಸಚಿವ ವಿ.ಸುನಿಲ್‌ ಕುಮಾರ್‌ ಉದ್ಘಾಟಿಸಿದರು. ಪೇಮಾನಂದ ಶೆಟ್ಟಿ, ಉಪಮೇಯರ್ ಪೂರ್ಣಿಮಾ, ಮೇಯರ್‌ ಜಯಾನಂದ ಅಂಚನ್‌, ಎಂ.ಎನ್‌.ರಾಜೇಂದ್ರ ಕುಮಾರ್‌, ಶಾಸಕ ಡಿ.ವೇದವ್ಯಾಸ ಕಾಮತ್‌, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಸುದರ್ಶನ ಎಂ., ದಿವಾಕರ ಪಾಂಡೇಶ್ವರ ಹಾಗೂ ಇತರರು ಇದ್ದಾರೆ
‘ಪಿಲಿ ಪರ್ಬ 2022’ ಹುಲಿ ವೇಷ ಸ್ಪರ್ಧಾ ಕೂಟವನ್ನು ಸಚಿವ ವಿ.ಸುನಿಲ್‌ ಕುಮಾರ್‌ ಉದ್ಘಾಟಿಸಿದರು. ಪೇಮಾನಂದ ಶೆಟ್ಟಿ, ಉಪಮೇಯರ್ ಪೂರ್ಣಿಮಾ, ಮೇಯರ್‌ ಜಯಾನಂದ ಅಂಚನ್‌, ಎಂ.ಎನ್‌.ರಾಜೇಂದ್ರ ಕುಮಾರ್‌, ಶಾಸಕ ಡಿ.ವೇದವ್ಯಾಸ ಕಾಮತ್‌, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಸುದರ್ಶನ ಎಂ., ದಿವಾಕರ ಪಾಂಡೇಶ್ವರ ಹಾಗೂ ಇತರರು ಇದ್ದಾರೆ   

ಮಂಗಳೂರು: ನಗರದಲ್ಲಿ ನವರಾತ್ರಿಯ ಸಡಗರ ರಂಗೇರುತ್ತಿದೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ನೆಹರೂ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ ‘ಕುಡ್ಲದ ಪಿಲಿ ಪರ್ಬ 2022’ ಹುಲಿ ವೇಷ ಸ್ಪರ್ಧಾ ಕೂಟ ನವರಾತ್ರಿ ವೈಭವದ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು.

ನಗರದ ಆಸುಪಾಸಿನಲ್ಲಿರುವ ವಿವಿಧ ಶಕ್ತಿ ದೇವತೆಗಳ ದೇವಸ್ಥಾನಗಳಿಗೆ ಭೇಟಿ ನೀಡಲು ನಗರಕ್ಕೆ ಬಂದ ಜನರಿಗೆ ‘ಪಿಲಿಪರ್ಬ’ದ ಸೊಬಗು ನೋಡುವ ಅವಕಾಶವೂ ಒದಗಿಬಂತು.

ಈ ಸ್ಪರ್ಧಾ ಕೂಟದಲ್ಲಿ 12 ತಂಡಗಳು ರೊಮಾಂಚನಕಾರಿ ಕಸರತ್ತುಗಳನ್ನು ಪ್ರದರ್ಶಿಸಿದರು. ಒಂದೊಂದು ಕಸರತ್ತು ಕೂಡ ಪ್ರೇಕ್ಷಕರ ಮೈನವಿರೇಳುವಂತೆ ಮಾಡಿತು. ತಾಸೆಯ ಪೆಟ್ಟಿನ ಲಯಕ್ಕೆ ಹುಲಿವೇಷ ಧಾರಿಗಳ ಕುಣಿತ, ಅವರು ಪ್ರದರ್ಶಿಸಿದ ನಾನಾ ಆಟಗಳು, ಆಳೆತ್ತರ ಜಿಗಿದು ಪ್ರದರ್ಶಿಸಿದ ಕಸರತ್ತುಗಳನ್ನು ಜನರು ಕಣ್ಣೆವೆಯಿಕ್ಕದೇ ವೀಕ್ಷಿಸಿದರು. ಯಾವುದೇ ತಂಡವು ಸಾಂಪ್ರದಾಯಿಕ ಶೈಲಿಯ ಮೇರೆಯನ್ನು ಮೀರಲಿಲ್ಲ.

ADVERTISEMENT

ಏಕಕಾಲದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಕುಳಿತು ಹುಲಿವೇಷ ಕುಣಿತವನ್ನು ನೋಡಲು ಸಂಘಟಕರು ವ್ಯವಸ್ಥೆ ಕಲ್ಪಿಸಿದ್ದರು. ಅಷ್ಟೂ ಆಸನಗಳು ಭರ್ತಿಯಾಗಿದ್ದವು. ಗ್ಯಾಲರಿಯ ಆಚೆಗೂ ಸೇರಿದ್ದ ಜನರು ತುದಿಗಾಲಿನಲ್ಲಿ ನಿಂತು ಹುಲಿಗಳ ರಂಗಿನಾಟವನ್ನುಕಣ್ತುಂಬಿಕೊಂಡರು. ಪ್ರತಿಯೊಬ್ಬರಿಗೂ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಪ್ರದರ್ಶನ ವೀಕ್ಷಿಸಲು ಬಂದ ಕೆಲವರು ಮುಖಕ್ಕೆ ಹುಲಿವೇಷದಂತೆ ಬಣ್ಣ ಹಾಕಿಸಿಕೊಂಡು ಸಂಭ್ರಮಪಟ್ಟರು.

‘ಪಿಲಿ ಪರ್ಬ’ವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಿ.ವೇದವ್ಯಾಸ ಕಾಮತ್, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಪಾಂಡೇಶ್ವರ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಶಕೀಲಾ ಕಾವಾ, ಜಗದೀಶ್ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಸುದರ್ಶನ ಎಂ., ಪ್ರಮುಖರಾದ ಗಿರಿಧರ ಶೆಟ್ಟಿ, ಉದಯ ಬಳ್ಳಾಲ್‌ಬಾಗ್, ಸಂತೋಷ್ ಕುಮಾರ್ ರೈ ಬೋಳಿಯಾರ್, ಕಸ್ತೂರಿ ಪಂಜ, ಭಾಸ್ಕರಚಂದ್ರ ಶೆಟ್ಟಿ, ಮನೋಹರ ಶೆಟ್ಟಿ ಕದ್ರಿ, ರೂಪಾ ಡಿ.ಬಂಗೇರ, ಕಿಶೋರ್ ಕುಮಾರ್, ಸುನಿಲ್ ಆಚಾರ್ ಇದ್ದರು.

‘ಪಿಲಿ ಪರ್ಬ’ ಪ್ರದರ್ಶನ ನೀಡಿದ ತಂಡಗಳು

ಸತ್ಯಸಾರಾಮಣಿ ತಂಡ ಪಾಂಡೇಶ್ವರ, ತುಳುವೆರ್ ಕುಡ್ಲ-ಶ್ರೀ ರಾಮ್ ಕ್ರಿಕೆಟರ್ಸ್, ಜೈಹಿಂದ್ ಮಂಕಿಸ್ಟ್ಯಾಂಡ್ ಹುಲಿ ಬಾಬುಗುಡ್ಡೆ, ಕಲ್ಲೇಗ ಟೈಗರ್ಸ್ ಪುತ್ತೂರು, ಕೊಡಿಯಾಲ್ ಬೈಲ್ ಫ್ರೆಂಡ್ಸ್, ಜೈ ಶಾರದಾಂಬ ಪೇಜಾವರ, ಪೊರ್ಕೋಡಿ, ಕೋಡಿಕಲ್ ವಿಶಾಲ್ ಟೈಗರ್ಸ್, ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್, ನಂದಿಗುಡ್ಡೆ ಫ್ರೆಂಡ್ಸ್‌ ಹುಲಿ ಬಾಬುಗುಡ್ಡ, ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು, ಪೊಳಲಿ ಟೈಗರ್ಸ್, ಕಾಳಿಚರಣ್ ಫ್ರೆಂಡ್ಸ್-ನ್ಯಾಷನಲ್ ಬೋಳೂರು.

***

‘ಕುಡ್ಲದ ಪಿಲಿಪರ್ಬ’ಕ್ಕೆ ನಿರೀಕ್ಷೆ ಮೀರಿ ಸ್ಪಂದನೆ ವ್ಯಕ್ತವಾಗಿದೆ. ಹುಲಿವೇಷ ತಂಡಗಳು ಸಾಂಪ್ರದಾಯಿಕ ಶೈಲಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿವೆ. ತುಳುನಾಡಿನ ಈ ಕಲೆಯನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು
-ಡಿ.ವೇದವ್ಯಾಸ ಕಾಮತ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.