
ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 44 ಕಿ.ಮೀ ರಸ್ತೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಸಂಸದರ ನಡೆ ಗ್ರಾಮದ ಕಡೆ ಕಾರ್ಯಕ್ರಮದಡಿ ಅವರು ಸುಳ್ಯ ತಾಲ್ಲೂಕಿನ ಬಾಳುಗೋಡು ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಬಾಳುಗೋಡು ಗ್ರಾಮದ ದಿ.ತಮ್ಮಯ್ಯ ಗೌಡ ಕ್ರೀಡಾಂಗಣ ಮುಚ್ಚಾರ - ಬೆಟ್ಟುಮಕ್ಕಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘2018ರ ನಂತರ ಗ್ರಾಮ ಸಡಕ್ ಯೋಜನೆ ನಮ್ಮ ಭಾಗಕ್ಕೆ ಯಾಕೆ ಮಂಜೂರಾಗಿಲ್ಲ’ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
‘ನಮ್ಮ ಜಿಲ್ಲೆಯ ಎಲ್ಲ ಹಳ್ಳಿಗಳೂ ರಸ್ತೆ ಸಂಪರ್ಕ ಪಡೆದುಕೊಂಡಿವೆ’ ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು. ಕರಾವಳಿ, ಮಲೆನಾಡಿನ ಭೌಗೋಳಿಕತೆ ಆಧರಿಸಿ ಪ್ರತ್ಯೇಕ ಮಾರ್ಗಸೂಚಿ ಬೇಕಾಗಿತ್ತು. ಅದರಂತೆ ನಾವು ಪ್ರಸ್ತಾವನೆ ಸಲ್ಲಿಸಿದ ಬಳಿಕ ಜಿಲ್ಲೆಯ ಹತ್ತು ಹಳ್ಳಿಗಳು ಪೋರ್ಟಲ್‌ನಲ್ಲಿ ನೋಂದಣಿಯಾಗಿವೆ. ಈ ಭಾಗದ ಜನರ ಬೇಡಿಕೆ ಸರಿಯಾಗಿದ್ದು, 10 ಹಳ್ಳಿಗಳಿಗೆ ಯೋಜನೆಯ ವರದಿ ತಯಾರಿಸಿ 44 ಕಿ.ಮೀ. ರಸ್ತೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಹಕ್ಕುಪತ್ರ ಸಮಸ್ಯೆ ಬಗೆಹರಿಸಲು ನಿರ್ದೇಶನ: ಬಾಳುಗೋಡು ಗ್ರಾಮದ ವಿವಿಧ ಪ್ರದೇಶಗಳಲ್ಲಿ ಹಕ್ಕುಪತ್ರ ಸಹಿತ ಮೂಲಸೌಲಭ್ಯ ವಂಚಿತರಾಗಿರುವ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಕಟಗೊಂಡಿರುವುದು ಪ್ರಸ್ತಾಪಗೊಂಡಿದ್ದು, ಅಲ್ಲಿನ ನಿವಾಸಿಗಳು ಸಂಸದರಿಗೆ ಹಕ್ಕುಪತ್ರ ನೀಡುವಂತೆ ಕ್ರಮ ವಹಿಸಲು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪಿಡಿಒ ಅವರಿಂದ ಮಾಹಿತಿ ಪಡೆದ ಸಂಸದ, ಆ ಜಾಗದ ಸಮಸ್ಯೆಯನ್ನು ಕಾನೂನು ರೀತಿಯಲ್ಲಿ ಬಗೆಹರಿಸಿ ಹಕ್ಕುಪತ್ರ ನೀಡಲು ಕ್ರಮಕ್ಕೆ ನಿರ್ದೇಶನ ನೀಡಿದರು.
ಬಾಳುಗೋಡು ಸೇರಿದಂತೆ ಬಿಎಸ್ಎನ್ಎಲ್ ಟವರ್‌ಗಳಲ್ಲಿನ ಸಮಸ್ಯೆ ಪರಿಶೀಲಿಸಿ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು. ಬಾಳುಗೋಡು ಭಾಗದ ರಸ್ತೆಗಳನ್ನು ಕೇಂದ್ರದ ಯೋಜನೆಯಡಿ ಸೇರಿಸಿ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದರು.
ಗಾಳಿಬೀಡು-ಕಡಮಕಲ್ ರಸ್ತೆಗೆ ಸಂಬಂಧಿಸಿ ಸುಳ್ಯ ಶಾಸಕಿ, ಮಡಿಕೇರಿ ಶಾಸಕರ ಜೊತೆ ಮಾತುಕತೆ ನಡೆಸಿದ್ದೇವೆ. ಮಡಿಕೇರಿ ಉಸ್ತುವಾರಿ ಸಚಿವರ ಜೊತೆ ಮಾತನಾಡಿ ಯಾವ ರೀತಿ ರಸ್ತೆ ನಿರ್ಮಿಸಬಹುದು ಎಂಬುದನ್ನು ತಿಳಿದು ಮುಂದುವರಿಯುತ್ತೇವೆ ಎಂದು ಭರವಸೆ ನೀಡಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿದರು. ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ವಿನಯ್ ಮುಳುಗಾಡು, ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಸುಳ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವಿನಯ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಮಲೆನಾಡು ಹಿತರಕ್ಷಣಾ ವೇದಿಕೆಯ ಕಿಶೋರ್ ಶಿರಾಡಿ, ಹರಿಹರ ಪಲ್ಲತಡ್ಕ ಗ್ರಾ.ಪಂ ಅಧ್ಯಕ್ಷ ವಿಜಯಕುಮಾರ್ ಅಂಙಣ, ಸುಳ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಸಹಕಾರ ಭಾರತಿ ಸುಳ್ಯ ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಸೋಮಶೇಖರ್ ಕಟ್ಟೆಮನೆ, ಬಿಜೆಪಿ ಬೂತ್ ಸಮಿತಿ ಬಾಳುಗೋಡು ಅಧ್ಯಕ್ಷ ರಾಧಾಕೃಷ್ಣ ಕಟ್ಟೆಮನೆ, ಜಯಂತ ಬಾಳುಗೋಡು ಭಾಗವಹಿಸಿದ್ದರು.
ಚಂದ್ರಹಾಸ ಶಿವಾಲ ಸ್ವಾಗತಿಸಿದರು. ಲೋಹಿತ್ ಮುಚ್ಚಾರ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.