ADVERTISEMENT

ಮಂಗಳೂರು: ಸಹಕಾರಿ ಬ್ಯಾಂಕ್‌ ಭದ್ರತೆ ಮೇಲೆ ಪೊಲೀಸರ ನಿಗಾ

ನೈನಾ ಜೆ.ಎ
Published 21 ಜನವರಿ 2025, 6:02 IST
Last Updated 21 ಜನವರಿ 2025, 6:02 IST
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಸಹಕಾರ ಸಂಘಗಳು, ಬ್ಯಾಂಕ್‌ಗಳ ಅಧಿಕಾರಿಗಳ ಸಭೆ ನಡೆಸಿದರು
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಸಹಕಾರ ಸಂಘಗಳು, ಬ್ಯಾಂಕ್‌ಗಳ ಅಧಿಕಾರಿಗಳ ಸಭೆ ನಡೆಸಿದರು   

ಮಂಗಳೂರು: ಸಹಕಾರಿ ಬ್ಯಾಂಕ್‌ಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ (ಎಸ್‌ಕೆಡಿಸಿಸಿ) ಬ್ಯಾಂಕ್‌ಗೆ ಜಿಲ್ಲಾ ಪೊಲೀಸರು ಸೂಚನೆ ನೀಡಲಿದ್ದಾರೆ.

ಜಿಲ್ಲೆಯ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ಸಹಕಾರ ಸಂಘಗಳ ಪ್ರತಿನಿಧಿಗಳ ಜೊತೆ ಪೊಲೀಸರು ನಿರಂತರ ಸಭೆ ನಡೆಸುತ್ತಿದ್ದು ಭದ್ರತೆಗೆ ಆದ್ಯತೆ ನೀಡುವಂತೆ ಸೂಚಿಸಲಾಗುತ್ತಿದೆ. ಕೋಟೆಕಾರ್‌ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತದಲ್ಲಿ ನಡೆದ ದರೋಡೆ ಪ್ರಕರಣದ ನಂತರ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್‌ ಎನ್‌. ‘ಪ್ರಜಾವಾಣಿ’ಗೆ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌, ಖಾಸಗಿ ಬ್ಯಾಂಕ್‌, ಸಹಕಾರಿ ಸಂಘ ಸೇರಿದಂತೆ 377 ಶಾಖೆಗಳು ಇವೆ. ಠಾಣೆಗಳ ವ್ಯಾಪ್ತಿ ಮತ್ತು ಉಪವಿಭಾಗಗಳ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನೀಡಿರುವ ಭದ್ರತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಭೆಗಳಲ್ಲಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚಿಸಲಾಗಿದೆ. 

ADVERTISEMENT

‘ರಾಷ್ಟ್ರೀಕೃತ ಬ್ಯಾಂಕ್‌ಗಳು  ಈಗಾಗಲೇ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿಕೊಂಡಿವೆ. ಸಹಕಾರಿ ಸಂಘಗಳ ಸಣ್ಣ ಶಾಖೆಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ಸಿಸಿಟಿವಿ ಕ್ಯಾಮೆರಾಗಳು ಕಡಿಮೆ ಇರುವುದು ಗಮನಕ್ಕೆ ಬಂದಿದೆ’ ಎಂದು ಯತೀಶ್ ತಿಳಿಸಿದರು.  

ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಠಾಣೆಗಳಲ್ಲಿ ಸಭೆಗಳನ್ನು ನಡೆಸಿದ್ದು ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಭದ್ರತೆಗೆ ಸಂಬಂಧಿಸಿದ ಕಾರ್ಯಸೂಚಿಗಳನ್ನು ಜಾರಿಗೆ ತರುವುದು, ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡುವುದು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಸೇರಿದಂತೆ ಒಟ್ಟಾರೆ ಭದ್ರತಾ ವ್ಯವಸ್ಥೆಯನ್ನು ಚುರುಕು ಮಾಡುವುದು ಸಭೆಯ ಪ್ರಮುಖ ಉದ್ದೇಶವಾಗಿತ್ತು. 

ತನಿಖೆಯಲ್ಲಿ ಏನೂ ಸಿಕ್ಕಿಲ್ಲ

ಜಾರಿ ನಿರ್ದೇಶನಾಲಯ ಅಧಿಕಾರಿ ಎಂದು ನಂಬಿಸಿ ಬಂಟ್ವಾಳ ತಾಲ್ಲೂಕು ಕೊಳ್ನಾಡು ಗ್ರಾಮದ ನಾರ್ಶದ ಬೀಡಿ ಉದ್ಯಮಿ ಸುಲೇಮಾನ್ ಅವರ ಮನೆಯಿಂದ ₹ 30 ಲಕ್ಷ ನಗದು ದೋಚಿರುವ ಪ್ರಕರಣದ ತನಿಖೆಯಲ್ಲಿ ಯಾವ ಮಾಹಿತಿಯೂ ಲಭ್ಯವಾಗಲಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

‘ಪ್ರಕಣರಣಕ್ಕೆ ಸಂಬಂಧಿಸಿ ನಾಲ್ಕು ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು ಕೆಲವು ಸುಳಿವು ಸಿಕ್ಕಿದೆ. ಆರೋಪಿಗಳು ಸದ್ಯದಲ್ಲೇ ಬಲೆಗೆ ಬೀಳಲಿದ್ದಾರೆ’ ಎಂದು ಅವರು ಹೇಳಿದರು. ‘ಕರ್ಣಾಟಕ ಬ್ಯಾಂಕ್‌ ಅಡ್ಯನಡ್ಕ ಶಾಖೆಯಿಂದ ಕಳವಾದ ಹಣದಲ್ಲಿ ಶೇಕಡ 60ರಿಂದ 70ರಷ್ಟನ್ನು ವಶಪಡಿಸಲಾಗಿದೆ. ಇಬ್ಬರು ಆರೋಪಿಗಳನ್ನು ಪತ್ತೆ ಮಾಡಲು ಇನ್ನೂ ಸಾಧ್ಯವಾಗಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.