ADVERTISEMENT

ಉಳ್ಳಾಲ: ತಪ್ಪಿಸಿಕೊಳ್ಳಲು ಯತ್ನ, ಆರೋಪಿ ಕಾಲಿಗೆ ಗುಂಡಿಕ್ಕಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 5:08 IST
Last Updated 17 ಜುಲೈ 2022, 5:08 IST
ಘಟನೆ ನಡೆದ ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ಘಟನೆ ನಡೆದ ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.   

ಮುಡಿಪು: ಸ್ಥಳ ಮಹಜರಿಗೆ ಕರೆದೊಯ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮಹಮದ್ ಮುಕ್ತಾರ್ ಅಹಮದ್ (27) ಮೇಲೆ ಉಳ್ಳಾಲ ಠಾಣೆಯ ಇನ್‌ಸ್ಪೆಕ್ಟರ್‌ಸಂದೀಪ್ ಅವರು ಭಾನುವಾರ ಮುಂಜಾನೆ ಅಸೈಗೋಳಿಯ ಪಟೋರಿ ಬಳಿ ಗುಂಡು ಹಾರಿಸಿದ್ದಾರೆ.

ಗಾಯಗೊಂಡಿರುವ ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಧರ್ಮನಗರ ನಿವಾಸಿಯಾಗಿರುವ ಆರೋಪಿ ಮಹಮದ್ ಮುಕ್ತಾರ್ 15 ಪ್ರಕರಣಗಳಲ್ಲಿ ಆರೋಪಿ. ಕೆಲವು ಪ್ರಕರಣಗಳಲ್ಲಿ ವಾರಂಟ್ ಜಾರಿಯಾಗಿತ್ತು. ಆತನನ್ನು ಉಳ್ಳಾಲ ಪೊಲೀಸರು ಶನಿವಾರ ಮಧ್ಯಾಹ್ನ ವಶಕ್ಕೆ ಪಡೆದಿದ್ದರು.

ಪ್ರಕರಣವೊಂದರಲ್ಲಿ ಬಳಸಿದ ವಾಹನ ಜಪ್ತಿ ಮಾಡಲು ಹಾಗೂ ಇತರ ಆರೋಪಿಗಳ ಪತ್ತೆ ಸಲುವಾಗಿ ಪೊಲೀಸರು ಆತನನ್ನು ಅಸೈಗೋಳಿಗೆ ಕರೆ ತಂದಿದ್ದರು. ಈ ವೇಳೆ ಆರೋಪಿಯು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ತೋರಿಸುವುದಾಗಿ ಸ್ಥಳಕ್ಕೆ ಕರೆದೊಯ್ದಿದ್ದ. ಏಕಾಏಕಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುದ್ದಿಗಾರರ ಜಿತೆ ಮಾತನಾಡಿದ ಪೊಲೀಸ್ ಕಮಿಷನರ್, ‘ಉಳ್ಳಾಲ ಠಾಣೆಯ ಇನ್ಸ್ಪೆಕ್ಟರ್ ಅವರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದರು. ಆಗಲೂ ಆರೋಪಿ ಶರಣಾಗದ ಕಾರಣ ಆತನ ಎಡ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಯನ್ನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದೇವೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ವಾಸುದೇವ್ ಹಾಗೂ ಅಬ್ಬಾಸ್ ಅವರಿಗೂ ಸಣ್ಣಪುಟ್ಟ ಗಾಯಗೊಂಡಿದ್ದು, ಅವರೂ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ಎಂದು ತಿಳಿಸಿದರು.

‘ಕೊಲೆ ಮತ್ತಿತರ ಗಂಭೀರ ಪ್ರಕರಣಗಳಲ್ಲಿ ವಾರಂಟ್ ಜಾರಿಯಾದ ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದೆವು. ಗೃಹಸಚಿವ ಆರಗ ಜ್ಞಾನೇಂದ್ರ ಅವರು ಇತ್ತೀಚೆಗೆ ಮಂಗಳೂರು ಕಮಿಷನರೇಟ್ಗೆ ಭೇಟಿ ನೀಡಿದಾಗ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದರು’ಎಂದು ಅವರು ತಿಳಿಸಿದರು.

‘ಪ್ರಕರಣಗಳಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.