ADVERTISEMENT

ಜಾಗ ಬಾಡಿಗೆಗೆ ನೀಡಿದ ಬಂದರು ಇಲಾಖೆ; ತನಿಖೆಗೆ ಸೂಚನೆ

ಭೋಗ್ಯದ ಅವಧಿ ಮುಗಿದ ಬಳಿಕವೂ ಹೆಂಚಿನ ಮಾಲೀಕರ ವಶದಲ್ಲೇ ಜಾಗ– ದಿಶಾ ಸಮಿತಿ ಸಭೆಯಲ್ಲಿ ಸಂಸದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 7:52 IST
Last Updated 15 ಫೆಬ್ರುವರಿ 2024, 7:52 IST
ದಿಶಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂಪಿ. ಮಾತನಾಡಿದರು. ಆಂಟನಿ ಮರಿಯಪ್ಪ, ಡಾ.ಕೆ.ಆನಂದ್, ಮೇಯರ್ ಸುಧೀರ್ ಶಟ್ಟಿ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ
ದಿಶಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂಪಿ. ಮಾತನಾಡಿದರು. ಆಂಟನಿ ಮರಿಯಪ್ಪ, ಡಾ.ಕೆ.ಆನಂದ್, ಮೇಯರ್ ಸುಧೀರ್ ಶಟ್ಟಿ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ   

ಮಂಗಳೂರು: ಇಲ್ಲಿನ ನೇತ್ರಾವತಿ ನದಿ ತೀರದಲ್ಲಿರುವ ಬಂದರು ಇಲಾಖೆಯ ಜಾಗವನ್ನು ಹೆಂಚಿನ ಕಾರ್ಖಾನೆ ಮಾಲೀಕರಿಗೆ ಭೋಗ್ಯಕ್ಕೆ ನೀಡಿದ್ದ ಅವಧಿ ಮುಗಿದ ಬಳಿಕ, ಆ ಜಾಗವನ್ನು ಮತ್ತೆ ಅವರಿಗೇ ಬಾಡಿಗೆಗೆ ನೀಡಿರುವ ಕುರಿತು ಇಲಾಖಾ ವಿಚಾರಣೆಗೆ ಕ್ರಮ ವಹಿಸುವಂತೆ ಸಂಸದ ನಳಿನ್ ಕುಮಾರ್‌ ಕಟೀಲ್ ಅವರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಅವರಿಗೆ ನಿರ್ದೇಶನ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಬುಧವಾರ ನಗರದ ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಅನುಷ್ಠಾನ ವಿಳಂಬದ ಕುರಿತು ಚರ್ಚೆ ನಡೆಯಿತು.

ಬಂದರು ಇಲಾಖೆಯು ಹೆಂಚಿನ ಕಾರ್ಖಾನೆಗಳ ಮಾಲೀಕರಿಗೆ ಜಾಗವನ್ನು ಬಾಡಿಗೆಗೆ ನೀಡಿದ್ದು, ಅವರು ಕಾಮಗಾರಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇಲ್ಲಿ 2.10 ಕಿ.ಮೀ ಉದ್ದಕ್ಕೆ ನದಿ ಅಭಿಮುಖ (ರಿವರ್‌ ಫ್ರಂಟ್‌) ಕಾಮಗಾರಿಯ ಅನುಷ್ಠಾನಕ್ಕೆ ಧಕ್ಕೆಯಾಗಿದೆ ಎಂದು ‌ಯೋಜನೆಯ ಕಾರ್ಯಪಾಲಕ ಎಂಜಿನಿಯರ್‌ ಚಂದ್ರಕಾಂತ್‌ ವಿವರಿಸಿದರು. 

ADVERTISEMENT

ಆಗ ಸಿಟ್ಟಾದ ಸಂಸದ, ‘ಬಂದರು ಇಲಾಖೆ ನಿರ್ದೇಶಕರು ದಿಶಾ ಸಮಿತಿ ಸಭೆಗೂ ಬರುತ್ತಿಲ್ಲ. ಅವರು ಹಣ ಪಡೆದೇ ಈ ರೀತಿ ಮಾಡಿರುವ ಶಂಕೆ ಇದೆ. ಹಾಗಾಗಿ ಇಲಾಖಾ ವಿಚಾರಣೆ ಮುಗಿದ ಬಳಿಕ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. 

ಜನರು ಅನಧಿಕೃತವಾಗಿ ದಾರಿ ಮಾಡಿಕೊಂಡು ರೈಲು ಹಳಿ ದಾಟುತ್ತಿದ್ದ ಕಡೆ ರೈಲ್ವೆ ಇಲಾಖೆಯವರು ತಡೆಬೇಲಿ ನಿರ್ಮಿಸಿದ್ದರಿಂದ ಸಾರ್ವಜನಿಕರಿಗೆ ಹಾಗೂ ಸ್ಥಳೀಯಾಡಳಿತಕ್ಕೆ ಸಮಸ್ಯೆ ಉಂಟಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗಮನ ಸೆಳೆದರು.

‘ಜನರು  ಹಳಿ ದಾಟುವ ಕಡೆ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ನಿತ್ಯ ಸರಾಸರಿ ಮೂರು–ನಾಲ್ಕು ಮಂದಿ ರೈಲು ಡಿಕ್ಕಿ ಹೊಡೆದು ಸಾಯುತ್ತಿದ್ದಾರೆ. ಹಾಗಾಗಿ ಈ ಕ್ರಮ ಕೈಗೊಂಡಿದ್ದೇವೆ’ ಎಂದು ಪಾಲಕ್ಕಾಡ್‌ ರೈಲ್ವೆ ವಿಭಾಗದ ಅಧಿಕಾರಿ ಸಮರ್ಥಿಸಿಕೊಂಡರು.

‘ರೈಲ್ವೆಇಲಾಖೆಯ ಈ ಕ್ರಮದಿಂದ  ಪಡೀಲ್‌–ಅಳಪೆ ಪ್ರದೇಶಗಳಲ್ಲಿ ಕೆಲವು ಕಡೆ ಕುಡಿಯುವ ನೀರು ಪೂರೈಕೆ, ಒಳಚರಂಡಿ ನಿರ್ವಹಣೆಗೂ ಅಡ್ಡಿಯಾಗಿದೆ’ ಎಂದು ಪಾಲಿಕೆ ಸದಸ್ಯರೊಬ್ಬರು ದೂರಿದರು.  ಜಿಲ್ಲಾಧಿಕಾರಿ ಸೂಚನೆ ನೀಡಿದರೂ ಬೇಲಿ ತೆರವುಗೊಳಿಸಲು ರೈಲ್ವೆ ಅಧಿಕಾರಿಗಳು ಒಪ್ಪಲಿಲ್ಲ. ಆಗ ಸಿಟ್ಟಿಗೆದ್ದ ನಳಿನ್‌ ಕುಮಾರ್‌, ‘ಅವರು ಬೇಲಿ ತೆರವುಗೊಳಿಸದಿದ್ದರೆ ರೈಲ್ವೆ ಇಲಾಖೆಯ ಕಚೇರಿಗಳಿಗೆ ನೀರಿನ ಸಂಪರ್ಕ ಕಡಿತಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಬಳಿಕ, ಶೀಘ್ರವೇ ಸಮಸ್ಯೆ ಇತ್ಯರ್ಥಕ್ಕೆ ಕ್ರಮವಹಿಸಲು ರೈಲ್ವೆ ಅಧಿಕಾರಿಗಳು ಒಪ್ಪಿಕೊಂಡರು.

ಸುಬ್ರಹ್ಮಣ್ಯ ರಸ್ತೆ– ಪುತ್ತೂರು ನಿಲ್ದಾಣಗಳ ನಡುವಿನ ರೈಲು ಮಾರ್ಗದ ವಿದ್ಯುದೀಕರಣ ಶೀಘ್ರವೇ ಪೂರ್ಣಗೊಳ್ಳಲಿದೆ. ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಪುತ್ತೂರು ವಿವೇಕಾನಂದ ಕಾಲೇಜಿನ ಬಳಿ  ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ 20 ಸಾವಿರ ಅರ್ಜಿ ಸಲ್ಲಿಕೆ ಗುರಿನಿಗದಿಪಡಿಸಿದ್ದೇವೆ. ಇದುವರೆಗೆ 14,455 ಅರ್ಜಿಗಳು ಸಲ್ಲಿಕೆಯಾಗಿವೆ. ಸರ್ವರ್‌ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕುಂಠಿತಗೊಂಡಿದೆ ಎಂದು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಗೋಕುಲ್ ದಾಸ್‌ ನಾಯಕ್‌ ಮಾಹಿತಿ ನೀಡಿದರು. ಫಲಾನುಭವಿಗಳು ಹೆಚ್ಚು ಇರುವ ಕಡೆ ಪ್ರಚಾರ ಶಿಬಿರ ನಡೆಸಿ ಈ ತಿಂಗಳ ಒಳಗೇ ಗುರಿ ಸಾಧನೆ ಮಾಡಬೇಕು ಎಂದು ಸಂಸದರು ಸೂಚಿಸಿದರು. 

ಜಿಲ್ಲೆಯಲ್ಲಿ ತೀರಾ ಒಳಪ್ರದೇಶದ ಗ್ರಾಮಗಳಲ್ಲಿ ಬ್ಯಾಟರಿ ಕಾರಣಕ್ಕೆ ಮೊಬೈಲ್‌ ನೆಟ್‌ವರ್ಕ್‌ ಸಂಪರ್ಕ ಕಡಿತಗೊಳ್ಳುವ ಸಮಸ್ಯೆ ನೀಗಿಸಲು 196 ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಹೊಸ ಟವರ್‌ ಸ್ಥಾಪನೆಗೆ ಕಂದಾಯ ಇಲಾಖೆಯಿಂದ ಈಚೆಗೆ 47 ಕಡೆ ಜಾಗ ಮಂಜೂರಾಗಿದ್ದು, ಅದರಲ್ಲಿ ಎಂಟು ಕಡೆ ಅರಣ್ಯ ಇಲಾಖೆ ತಗಾದೆ ತೆಗೆದಿದೆ ಎಂದು ಬಿಎಸ್‌ಎನ್ಎಲ್‌ ಅಧಿಕಾರಿಗಳು ಮಾಹಿತಿ ನೀಡಿದರು. 

ಕೊಲ್ಲಮೊಗ್ರು ಗ್ರಾಮದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ನೀಗಿಸಲು ಕ್ರಮವಹಿಸುವಂತೆ ಸಂಸದ ಸೂಚಿಸಿದರು.

ಯಕ್ಷಗಾನಕ್ಕೆ ಸಂಬಂಧಿಸಿ ಅಂಚೆ ಚೀಟಿಯನ್ನು ಅಂಚೆ ಇಲಾಖೆ ಸಿದ್ಧಪಡಿಸಿದ್ದು, ಇದೇ 25ರಂದು ಅದನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಂಸದ ತಿಳಿಸಿದರು. 

ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಆನಂದ್‌, ಜಿಲ್ಲಾ ಉಪರಣ್ಯ ಸಂರಕ್ಷಣಾಧಿಕಾರಿ ಆಂಟಿನಿ ಮರಿಯಪ್ಪ, ಪಾಲಿಕೆ ಆಯುಕ್ತ ಸಿ.ಎಲ್‌.ಆನಂದ್‌ ಭಾಗವಹಿಸಿದ್ದರು. 

ಜೆಜೆಎಂ ಅಡಿ ಅನಧಿಕೃತ ಸಂಪರ್ಕ: ಮೇಯರ್‌ ಆಕ್ಷೇಪ

ಅಡ್ಯಾರ್‌ ಗ್ರಾಮಕ್ಕೆ ತುಂಬೆ ಜಲಾಶಯದ ನೀರನ್ನು ಅನಧಿಕೃತವಾಗಿ ಬಳಸಿಕೊಳ್ಳಲು ಜಲಜೀವನ್‌ ಯೋಜನೆಯಡಿ ಕೊಳವೆಮಾರ್ಗ ಅಳವಡಿಸಿದ್ದಕ್ಕೆ ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ಆಕ್ಷೇಪ ವ್ಯಕ್ತಪಡಿಸಿದರು. ‘ನಗರಕ್ಕೆ ಪೂರೈಸುವುದಕ್ಕೇ ನೀರು ಸಾಲುತ್ತಿಲ್ಲ. ತುಂಬೆ ಜಲಾಶಯದ ನೀರನ್ನು ಅಡ್ಯಾರ್‌ ಗ್ರಾಮದ ಅಕ್ರಮ ಸಂಪರ್ಕಗಳಿಗೆ ಪೂರೈಸಿದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.

‘ಅಮೃತ ಯೋಜನೆಯಡಿ ರಾಮಲ್‌ಕಟ್ಟೆಯಲ್ಲಿ ನಿರ್ಮಿಸಿರುವ 20 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕದಿಂದ 10 ಎಂಎಲ್‌ಡಿ ನೀರನ್ನು ಗ್ರಾಮಾಂತರ ಪ್ರದೇಶಕ್ಕೆ ಪೂರೈಸಬಹುದು. ಈ ಘಟಕದ ಕಾಮಗಾರಿ ಪೂರ್ಣಗೊಂಡಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಜೆಜೆಎಂ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವುದನ್ನು ತಪ್ಪಿಸಬೇಕು‘ ಎಂದು ನಳಿನ್ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.