ಮಂಗಳೂರು: ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಸರ್ಕಾರ ಮತ್ತು ಹೈಕೋರ್ಟ್‌ಗೆ ಅಂಚೆ ಕಾರ್ಡ್‌ಗಳನ್ನು ಕಳುಹಿಸಲು ನಿರ್ಧರಿಸಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಕೀಲರ ಸಂಘಗಳ ಪದಾಧಿಕಾರಿಗಳು ಅ.23ರಂದು ಕಾರ್ಡ್‌ಗಳನ್ನು ಕಳುಹಿಸಲು ದಿನ ನಿಗದಿ ಮಾಡಿದರು.
ಪೀಠ ಸ್ಥಾಪನೆ ಕುರಿತು ಮಂಗಳೂರು ವಕೀಲರ ಸಂಘದಲ್ಲಿ ಸೋಮವಾರ ನಡೆದ ಉಭಯ ಜಿಲ್ಲೆಗಳ ವಕೀಲರ ಸಂಘಗಳ ಸಭೆಯಲ್ಲಿ ಈ ವಿಷಯವನ್ನು ಘೋಷಿಸಲಾಯಿತು. ಮುದ್ರಿತ ಐದು ಸಾವಿರ ಅಂಚೆ ಕಾರ್ಡ್‌ಗಳನ್ನು ಸಭೆಯ ನಂತರ ಹಂಚಲಾಯಿತು. ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಕಾನೂನು ಸಚಿವರಿಗೆ ಕಾರ್ಡ್‌ಗಳನ್ನು ರವಾನಿಸಲಾಗುವುದು ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ತಿಳಿಸಿದರು.
ಹೋರಾಟ ಸಮಿತಿಯನ್ನು ರಚಿಸಿ ನ.15ರಂದು ಪದಾಧಿಕಾರಿಗಳ ಹೆಸರನ್ನು ಘೋಷಿಸಲು ಮತ್ತು ಜನಪ್ರತಿನಿಧಿಗಳ ಭೇಟಿ, ವಿದ್ಯಾರ್ಥಿಗಳ ಭೇಟಿ, ಸಾಮಾಜಿಕ ಜಾಲತಾಣ ನಿರ್ವಹಣೆ, ಹೋರಾಟ, ಜನಾಭಿಪ್ರಾಯ ಸಂಗ್ರಹ ಮತ್ತು ಮಾಧ್ಯಮ ನಿರ್ವಹಣೆ ಸಮಿತಿಗಳಿಗೆ ಮುಂದಾಳುತ್ವ ವಹಿಸುವವರನ್ನು ಆಯ್ಕೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಸಭೆಗಳಲ್ಲಿ ನಿರ್ಣಯ ಮಂಡಿಸಿ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಕೋರಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ ರಾಜ್ಯದ ಕರಾವಳಿ ಕರ್ನಾಟಕದಲ್ಲಿ ಮಾತ್ರ ಹೈಕೋರ್ಟ್ ಪೀಠ ಇಲ್ಲ. ಇಲ್ಲಿ ದಾವೆಗಳು ತುಂಬಾ ದಾಖಲಾಗುತ್ತಿವೆ. ಆದ್ದರಿಂದ ಪೀಠ ಸ್ಥಾಪನೆಗೆ ಕರಾವಳಿ ಅರ್ಹವಾಗಿದೆ ಎಂದರು. ಸರ್ಕಾರದ ಮೇಲೆ ಒತ್ತಡ ಹೇರಬೇಕು, ಮುಖ್ಯ ನ್ಯಾಯಮೂರ್ತಿಯವರನ್ನೂ ಭೇಟಿಯಾಗಿ ಮನವಿ ಮಾಡಬೇಕು ಎಂದು ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಸಲಹೆ ನೀಡಿದರು.
ವಕೀಲ ಮಹಮ್ಮದ್ ಹನೀಫ್ ಮಾತನಾಡಿ ವಿದ್ಯಾರ್ಥಿ ಸಂಘಟನೆಗಳು ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಜಿಲ್ಲಾಧಿಕಾರಿ ಕಚೇರಿಯಿಂದ ಸ್ಟೇಟ್ ಬ್ಯಾಂಕ್ ವರೆಗೆ ಮಾನವ ಸರಪಳಿ ಮಾಡಿ ಹಕ್ಕೊತ್ತಾಯ ಮಂಡಿಸಬೇಕು ಎಂದು ಸೂಚಿಸಿದರೆ ಎರಡೂ ಜಿಲ್ಲೆಗಳ ಸಂಸದರು, ಶಾಸಕರು ಮತ್ತು ಮಾಜಿ ಶಾಸಕರನ್ನು ಭೇಟಿಯಾಗಿ ಹೋರಾಟಕ್ಕೆ ಕೈ ಜೋಡಿಸುವಂತೆ ಕೋರಬೇಕು ಎಂದು ಎಂ.ಬಿ ನರೋನ್ಹ ತಿಳಿಸಿದರು.
ಮೂಡುಬಿದಿರೆಯಲ್ಲಿ ಈಗಾಗಲೇ ಹೋರಾಟ ಅರಂಭಗೊಂಡಿದೆ. ಶಿರ್ತಾಡಿ ಮತ್ತು ಆಳ್ವಾಸ್ ಕಾಲೇಜಿನ ಕಾನೂನು ವಿದ್ಯಾರ್ಥಿಗಳನ್ನು ಭೇಟಿಯಾಗಿ ವಿಷಯ ತಿಳಿಸಲಾಗಿದೆ ಎಂದು ಮೂಡುಬಿದಿರೆ ವಕೀಲರ ಸಂಘದ ಬಾಹುಬಲಿ ಪ್ರಸಾದ್ ತಿಳಿಸಿದರು. ಎಸ್‌ಡಿಎಂ ಕಾಲೇಜಿನಲ್ಲಿ ಈಗಾಗಲೇ ಅಭಿಯಾನ ಆರಂಭಗೊಂಡಿದೆ ಎಂದು ತಿಳಿಸಿದ ಪ್ರಾಧ್ಯಾಪಕಿ ಸುಮಾ, ಹೈಕೋರ್ಟ್ ಪೀಠ ಯಾಕೆ ಬೇಕು ಎಂಬುದನ್ನು ಜನರಿಗೆ ತಿಳಿಸಬೇಕು ಎಂದರು.
ಶಾಸಕ ಐವನ್ ಡಿಸೋಜ, ವಕೀಲರಾದ ವಿಕ್ರಂ ಮಂಗಳೂರು, ಮಯೂರ್ ಕೀರ್ತಿ, ಪೃಥ್ವೀಶ್, ಜಯಪ್ರಕಾಶ್, ದಿನಕರ ಶೆಟ್ಟಿ, ಮೋನಪ್ಪ ಭಂಡಾರಿ, ಪೃಥ್ವಿರಾಜ್, ಹರೀಶ್ ಮೂಡುಬಿದಿರೆ, ಟಿ.ಎನ್ ಪೂಜಾರ್, ರಿಚರ್ಡ್ ಬಂಟ್ವಾಳ, ಶ್ರೀಧರ ಹಾಗೂ ಜಗದೀಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.