ಮಂಗಳೂರು: ಸ್ವಾತಂತ್ರ್ಯ ಸುಖಾಸುಮ್ಮನೆ ದಕ್ಕಿದ್ದಲ್ಲ, ಅದಕ್ಕೆ ಅನೇಕರ ಬಲಿದಾನದ ಹಿನ್ನೆಲೆ ಇದೆ. ಸ್ವಾತಂತ್ರ್ಯವನ್ನು ಅನುಭವಿಸುವಾಗ ಅದರ ನೆನಪು ಇರಬೇಕು ಎಂದು ಹುತಾತ್ಮ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ತಾಯಿ ಅನುರಾಧಾ ಹೇಳಿದರು.
ರಾಷ್ಟ್ರಭಕ್ತ ನಾಗರಿಕರ ವೇದಿಕೆಯ ಸುರತ್ಕಲ್ ಮತ್ತು ಮಂಗಳೂರು ಘಟಕ ಕಾರ್ಗಿಲ್ ವಿಜಯೋತ್ಸವದ 25ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಕೆಪಿಟಿ ವೃತ್ತದ ಬಳಿ ಇರುವ ಯುದ್ಧ ಸ್ಮಾರಕದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತ ದೇಶ ಪ್ರಾಕ್ಸಿ ಯುದ್ಧ ಸೇರಿದಂತೆ ವಿವಿಧ ಬಗೆಯ ಆಕ್ರಮಣಗಳಿಂದ ತೊಂದರೆಗೆ ಒಳಗಾಗಿರುವ ದೇಶ. ಯುದ್ಧಕ್ಕೆ ಸಂಬಂಧಿಸಿ ಸರ್ಕಾರ, ಸೈನಿಕರು ಹಾಗೂ ಸೈನಿಕರ ಕುಟುಂಬದವರು ಬೆಲೆ ತೆತ್ತಿದ್ದಾರೆ. ಯುದ್ಧದಲ್ಲಿ ಆಪ್ತರನ್ನು ಕಳೆದುಕೊಳ್ಳುವುದರ ನೋವನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಅದನ್ನು ಅನುಭವಿಸಿದವರಿಗೆ ಮಾತ್ರ ಸ್ವಾತಂತ್ರ್ಯದ ಬೆಲೆ ತಿಳಿಯುತ್ತದೆ. ಹೀಗೆ ಆಗಬಾರದು, ಎಲ್ಲರಿಗೂ ಅದರ ಅರಿವು ಇರಬೇಕು’ ಎಂದು ಅವರು ಆಶಿಸಿದರು.
‘ದೇಶಕ್ಕಾಗಿ ಆಪ್ತರು ಪ್ರಾಣ ಕಳೆದುಕೊಂಡಾಗ ಸಮಾಜ ಮಿಡಿಯುತ್ತದೆ. ಯೋಧರ ಕುಟುಂಬಗಳ ಬದುಕು ಮುಳುಗದೆ ಜೀವಸತ್ವ ಪಡೆದುಕೊಳ್ಳಲು ಅದು ನೆರವಾಗುತ್ತದೆ. ಬಲಿದಾನದ ಮೂಲಕ ಸಮಾಜಕ್ಕೆ ಒಬ್ಬರನ್ನು ಕೊಡಲು ಸಾಧ್ಯವಾಯಿತು ಎಂಬುದು ಸಾರ್ಥ್ಯಕ್ಯ ಭಾವ ಮೂಡಿಸುತ್ತದೆ. ಎಲ್ಲ ಕಳೆದುಕೊಂಡಿರುವ ಅವರ ಬಾಳಿನಲ್ಲಿ ಬೆಳಕು ಮೂಡಿಸಲು ಇಂಥ ಕಾರ್ಯಕ್ರಮಗಳು ನಡೆಯಬೇಕು’ ಎಂದು ಅನುರಾಧಾ ಹೇಳಿದರು.
ಸುರತ್ಕಲ್‌ನ ಕರ್ನಾಟಕ ಸೇವಾವೃಂದ ವೃತ್ತದ ಬಳಿಯಿಂದ ದ್ವಿಚಕ್ರವಾಹನ ಜಾಥಾ ನಡೆಯಿತು. ತೆರೆದ ವಾಹನವೊಂದರಲ್ಲಿ ಯುದ್ಧ ಸ್ಮಾರಕ ಮತ್ತು ಇನ್ನೊಂದರಲ್ಲಿ ಪ್ರಾಂಜಲ್ ಅವರ ಪ್ರತಿಮೆಯೊಂದಿಗೆ ಸಾಗಿದ ಜಾಥಾದಲ್ಲಿ ಭಾರತ ಮಾತೆಗೆ ಜಯಕಾರ ಮೊಳಗಿತು. ಪ್ರಾಂಜಲ್ ಅವರ ತಂದೆ ವೆಂಕಟೇಶ್, ತಾಯಿ ಅನುರಾಧಾ ಮತ್ತು ಮಾಜಿ ಸೈನಿಕರನ್ನು ತೆರೆದ ಜೀಪ್‌ನಲ್ಲಿ ಕರೆತರಲಾಯಿತು.
ಕೆಪಿಟಿಯ ಯುದ್ಧಸ್ಮಾರಕದ ಆವರಣದಲ್ಲಿ ಪ್ರಾಂಜಲ್ ಅವರ ತಂದೆ ತಾಯಿ, ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ನಾಯಕ್ ಲೀಲಾಧರ ಕಡಂಬೋಡಿ, ನಾಯಕ್ ಪ್ರವೀಣ್ ಶೆಟ್ಟಿ ಮತ್ತು ಚೀಫ್ ಪೆಟಿ ಆಫೀಸರ್ ವಿಜಯನ್ ಅವರನ್ನು ಗೌರವಿಸಲಾಯಿತು.
ಬ್ರಿಗೇಡಿಯರ್ ಐ.ಎನ್.ರೈ ಮಾತನಾಡಿ ಸೈನಿಕರ ಬಲಿದಾನವಾದರೆ ಇಡೀ ದೇಶವೇ ನೆನಪಿಸಿಕೊಳ್ಳುತ್ತದೆ. ಅದಕ್ಕಿಂತ ದೊಡ್ಡ ಗೌರವ ಬೇರೆ ಇಲ್ಲ ಎಂದರು.
ರಾಷ್ಟ್ರಭಕ್ತ ನಾಗರಿಕರ ವೇದಿಕೆಯ ಸುರತ್ಕಲ್ ಘಟಕದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಣ್ಣಪ್ಪ ದೇವಾಡಿಗ, ಮಾಜಿ ಕಾರ್ಯದರ್ಶಿ ಮಹೇಶ ಮೂರ್ತಿ, ಮುಖಂಡ ಸಂದೀಪ್ ಪಂಪ್‌ವೆಲ್ ಇದ್ದರು. ಶ್ರೀಕಾಂತ ಬಾಳ ಸ್ವಾಗತಿಸಿದರು.
ಭಾವುಕರಾದ ಅನುರಾಧಾ
ಪತಿ ವೆಂಕಟೇಶ್ ಅವರ ಬಳಿ ನಿಂತು ಪ್ರಾಂಜಲ್ ಬಗ್ಗೆ ಮಾತನಾಡಿ ಭಾವುಕರಾದ ಅನುರಾಧಾ ‘ಪ್ರಾಂಜಲ್ ತುಂಬ ಇಷ್ಟಪಟ್ಟಿದ್ದ ನಗರ ಇದು. ಇಲ್ಲಿನ ಇಂಚಿಂಚೂ ಆತನಿಗೆ ಗೊತ್ತಿತ್ತು. ಯುದ್ಧಸ್ಮಾರಕದ ಬಳಿ ಆತ ಸಾಕಷ್ಟು ಓಡಾಡಿದ್ದಾನೆ. ಇಂಥ ಜಾಗದಲ್ಲಿ ಆತನ ಸ್ಮರಣೆ ಮಾಡುತ್ತಿರುವುದರಿಂದ ಇಂದು ತುಂಬ ಖುಷಿಪಟ್ಟಿರುತ್ತಾನೆ ಎಂದು ಹೇಳುತ್ತಿದ್ದಂತೆ ಎಲ್ಲರ ಕಣ್ಣಾಲಿಗಳು ಒದ್ದೆಯಾದವು. ಜಡಿಮಳೆಯ ನಡುವೆಯೇ ಕಾರ್ಯಕ್ರಮ ನಡೆಯಿತು. ಛತ್ರಿ ಹಿಡಿದುಕೊಂಡು ಮತ್ತು ರೇನ್ ಕೋಟ್ ಹಾಕಿಕೊಂಡು ನಿಂತ ಜನರು ಒಂದಿಷ್ಟೂ ಕದಲಲಿಲ್ಲ. ವಿಶ್ವನಾಥ್ ಅವರ ಸಿರಿಕಂಠದಲ್ಲಿ ಮೊಳಗಿದ ‘ವಂದೇ ಮಾತರಂ’ ಎಲ್ಲರನ್ನೂ ಮಂತ್ರಮುಗ್ದಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.