ADVERTISEMENT

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತ ಇಬ್ಬರು ಆರೋಪಿಗಳು ಪೊಲೀಸ್ ಕಸ್ಟಡಿಗೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 11:10 IST
Last Updated 30 ಜುಲೈ 2022, 11:10 IST
ಮಹಮ್ಮದ್ ಝಾಕೀರ್
ಮಹಮ್ಮದ್ ಝಾಕೀರ್    

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಂತಕರಿಗೆ ಸಹಕಾರ ನೀಡಿರುವ ಆರೋಪದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಸವಣೂರಿನ ಮಹಮ್ಮದ್ ಝಾಕೀರ್ ಮತ್ತು ಬೆಳ್ಳಾರೆಯ ಶಫೀಕ್ ಎಂಬುವರನ್ನು ಶನಿವಾರ ಪುತ್ತೂರು ನ್ಯಾಯಾಲಯವು 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಮಹಮ್ಮದ್ ಝಾಕೀರ್ ಮತ್ತು ಶಫೀಕ್‌ನನ್ನು ಬೆಳ್ಳಾರೆ ಠಾಣೆಯ ಪೊಲೀಸರು ಬಂಧಿಸಿ, ಗುರುವಾರ ಸಂಜೆ ಪುತ್ತೂರಿನ ಪ್ರಧಾನ ಹಿರಿಯ ವ್ಯಾವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶ ಗೌಡ ಆರ್.ಪಿ ಅವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು. ಈ ನಡುವೆ ಬೆಳ್ಳಾರೆ ಠಾಣೆಯ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಗಳಿಬ್ಬರನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿಕೆ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ ನ್ಯಾಯಾಲಯ ಇಬ್ಬರನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಕಡಬ ತಾಲ್ಲೂಕಿನ ಸವಣೂರಿನಲ್ಲಿ ಫಾಸ್ಟ್‌ಫುಡ್‌ ಅಂಗಡಿ ವ್ಯವಹಾರ ನಡೆಸುತ್ತಿರುವ ಮಹಮ್ಮದ್ ಝಾಕೀರ್ ಪುತ್ತೂರು ತಾಲ್ಲೂಕಿನ ಸರ್ವೇ ವಲಯ ಎಸ್‌ಡಿಪಿಐ ಘಟಕದ ಅಧ್ಯಕ್ಷನಾಗಿದ್ದ. ಎಸ್‌ಡಿಪಿಐ ಪಕ್ಷದಲ್ಲಿ ತೊಡಗಿಸಿಕೊಂಡಿದ್ದ ಬೆಳ್ಳಾರೆಯ ಶಫೀಕ್ ಎಂಬಾತ ಸುಳ್ಯ ತಾಲ್ಲೂಕಿನ ವಿವಿಧೆಡೆ ವ್ಯವಹರಿಸುತ್ತಿರುವ ‘ಪ್ರಗತಿ’ ಹೆಸರಿನ ಅಡಿಕೆ, ಕೃಷಿ ಹಾಗೂ ಕಾಡುತ್ಪನ್ನಗಳ ಖರೀದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.