ADVERTISEMENT

ಯೋಧರ ಸುರಕ್ಷತೆಗಾಗಿ ಉಳ್ಳಾಲ ದರ್ಗಾದಲ್ಲಿ ಪ್ರಾರ್ಥನೆ 

​ಪ್ರಜಾವಾಣಿ ವಾರ್ತೆ
Published 13 ಮೇ 2025, 13:13 IST
Last Updated 13 ಮೇ 2025, 13:13 IST
ದೇಶ ರಕ್ಷಣೆಯಲ್ಲಿ ನಿರತರಾಗಿರುವ ಯೋಧರ ಸುರಕ್ಷತೆಗಾಗಿ ಉಳ್ಳಾಲ ದರ್ಗಾ ಸಮಿತಿಯಿಂದ ಪ್ರಾರ್ಥನೆ ನಡೆಯಿತು
ದೇಶ ರಕ್ಷಣೆಯಲ್ಲಿ ನಿರತರಾಗಿರುವ ಯೋಧರ ಸುರಕ್ಷತೆಗಾಗಿ ಉಳ್ಳಾಲ ದರ್ಗಾ ಸಮಿತಿಯಿಂದ ಪ್ರಾರ್ಥನೆ ನಡೆಯಿತು   

ಉಳ್ಳಾಲ: ‘ಯುದ್ಧ ಎಷ್ಟೇ ಅನಿವಾರ್ಯವಾದರೂ ಅದು ಅಪಾರ ನಾಶ ಉಂಟುಮಾಡುತ್ತದೆ. ‌ಸಾವಿರಾರು ಕುಟುಂಬಗಳನ್ನು ಅನಾಥಗೊಳಿಸಿ, ಮಾನವೀಯ ಸಂಕಷ್ಟಗಳನ್ನು ಉಂಟುಮಾಡುತ್ತದೆ. ಆದರೂ, ರಾಷ್ಟ್ರದ ಭದ್ರತೆ ಮತ್ತು ಭವಿಷ್ಯವನ್ನು ಕಾಯ್ದುಕೊಳ್ಳುವುದು ಮುಖ್ಯವಾದಾಗ ಯುದ್ಧಕ್ಕೂ ಪ್ರಾಮುಖ್ಯತೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು’ ಎಂದು ರಾಜ್ಯ ಎಸ್‌ವೈಎಸ್ ಸಂಘಟನಾ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಹೇಳಿದರು.

ದೇಶ ರಕ್ಷಣೆಯಲ್ಲಿ ನಿರತರಾಗಿರುವ ಯೋಧರ ಸುರಕ್ಷತೆ ದೃಷ್ಟಿಯಿಂದ ಉಳ್ಳಾಲ ದರ್ಗಾ ಸಮಿತಿ ಹಮ್ಮಿಕೊಂಡಿದ್ದ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ಪಹಲ್ಗಾಮ್ ಘಟನೆಯು ಭಾರತ-ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಗಂಭೀರ ಕಾರಣವಾಗಿದೆ. ಇಂಥ ಘಟನೆಗಳಿಂದ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಡುತ್ತಿದೆ. ಭಾರತ ಮತ್ತು ಪಾಕಿಸ್ತಾನ ಶಾಂತಿ ಮತ್ತು ಸೌಹಾರ್ದದಿಂದ ಬದುಕುವ ಅಗತ್ಯವಿದೆ. ಆದರೆ, ಆ ದಿಕ್ಕಿಗೆ ಸಾಗಬೇಕಾದ ಬದಲಿಗೆ, ಎರಡೂ ರಾಷ್ಟ್ರಗಳ ಸಂಬಂಧ ಪ್ರತಿಕೂಲ ದಿಕ್ಕಿನಲ್ಲಿ ಸಾಗುತ್ತಿವೆ ಎಂಬುದು ವಿಷಾದಕರವಾಗಿದೆ ಎಂದರು.

ADVERTISEMENT

ಪಾಕಿಸ್ತಾನದಲ್ಲಿ ನೆಲೆಸಿರುವ ಉಗ್ರ ಸಂಘಟನೆಗಳು ಭಾರತದ ಮೇಲೆ ದಾಳಿಗೆ ಮುಂದಾಗುತ್ತಿರುವುದು ದೇಶದ ಆಂತರಿಕ ಶಾಂತಿ ಮತ್ತು ಭದ್ರತೆಗೆ ಆಪತ್ತು ತಂದಿವೆ. ಇಂಥ ಭಯೋತ್ಪಾದಕರನ್ನು ತಡೆಗಟ್ಟುವುದು ಹಾಗೂ ಅವರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಭಾರತದ ಮುಸ್ಲಿಮರು ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಬೆಂಬಲ ನೀಡುವುದಿಲ್ಲ. ಇಸ್ಲಾಮ್ ಧರ್ಮವೂ ಭಯೋತ್ಪಾದನೆಗೆ ಸಹಕಾರ ನೀಡುವುದಿಲ್ಲ. ದೇಶಪ್ರೇಮವೆಂಬ ಪರಮ ಮೌಲ್ಯವನ್ನು ಎಲ್ಲರೂ ಹಿರಿದಾಗಿ ನೋಡಬೇಕು. ಈ ದೇಶ ನಮ್ಮ ಹುಟ್ಟೂರಾಗಿದ್ದು, ಅದನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದರು.

ಸಯ್ಯಿದ್ ಮದನಿ ಅರೆಬಿಕ್ ಕಾಲೇಜಿನ ಪ್ರೊ.ನೌಮಾನ್ ನೂರಾನಿ ದುಆ ನೆರವೇರಿಸಿದರು.

ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಹನೀಫ್ ವಿಷಯ ಮಂಡಿಸಿ, ಯುದ್ಧದ ತೀವ್ರತೆಯ ನಡುವೆ, ದೇಶದ ಸುದೀರ್ಘ ಶಾಂತಿ ಮತ್ತು ಸೈನಿಕರ ಸುರಕ್ಷತೆ ಅತಿ ಪ್ರಾಮುಖ್ಯತೆಯ ವಿಷಯವಾಗಿದೆ. ಇಂಥ ಸಂದರ್ಭದಲ್ಲಿ, ನಾವು ನಾಡಿನ ಪ್ರಜೆಗಳಾಗಿ ಒಂದಾಗಬೇಕು. ಸರ್ಕಾರಕ್ಕೆ ಬೆಂಬಲ ನೀಡಬೇಕು. ರಾಷ್ಟ್ರೀಯ ಏಕತೆಯ ದೃಢ ಸಂಕಲ್ಪವನ್ನು ಪ್ರದರ್ಶಿಸಬೇಕು. ಯೋಧರ ಸುರಕ್ಷತೆಗಾಗಿ ಮಾಡುವ ಪ್ರಾರ್ಥನೆ ಅವರ ಮೇಲೆ ಇರುವ ನಮ್ಮ ಪ್ರೀತಿ, ಗೌರವ ಮತ್ತು ಕರ್ತವ್ಯದ ಪ್ರತೀಕವಾಗಬೇಕು. ಪ್ರತಿಯೊಬ್ಬರು ತಮ್ಮ ಧರ್ಮದ ಪ್ರಕಾರ, ದಿನದ ಐದು ಪ್ರಾರ್ಥನೆಗಳಲ್ಲಿ ಯೋಧರಿಗಾಗಿ ಹಾಗೂ ದೇಶದ ರಕ್ಷಣೆಗೆ ಪ್ರಾರ್ಥಿಸುವಂತೆ ಮಾಡುವಂತೆ ಮನವಿ ಮಾಡಲಾಗಿದೆ ಎಂದರು.

ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿರಾಜುದ್ದೀನ್ ಸಖಾಫಿ ಕನ್ಯಾನ, ಸಿರಾಜುದ್ದೀನ್ ಸಖಾಫಿ ಪತ್ತನಾಪುರಮ್ ಮಾತನಾಡಿದರು.

ಸಯ್ಯದ್ ಹಬೀಬುಲ್ಲಾಹ್ ತಂಙಳ್ ಪೆರುವಾಯಿ ದುಆ ನೆರವೇರಿಸಿದರು. ಆಝಾದ್ ನಗರ ಮಸೀದಿ ಅಧ್ಯಕ್ಷ ಮುಹಮ್ಮದ್, ಖತೀಬ್ ಅಬ್ದುಲ್ ಸಮದ್ ಅಹ್ಸನಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯರಾದ ಝೈನುದ್ದೀನ್ ಮೇಲಂಗಡಿ, ಅಬ್ದುಲ್ ಖಾದರ್ ಕೋಡಿ, ಇಮ್ತಿಯಾಝ್, ಅಬೂಬಕ್ಕರ್ ಹೈದರಲಿ ನಗರ, ಅರೆಬಿಕ್ ಕಾಲೇಜು ಪ್ರೊ.ಇಬ್ರಾಹಿಂ ಅಹ್ಸನಿ, ಆಝಾದ್ ಇಸ್ಮಾಯಿಲ್, ಕೇಂದ್ರ ಜುಮಾ ಮಸೀದಿ ಖತೀಬ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ, ಯು.ಕೆ.ಯೂಸುಫ್ ಉಳ್ಳಾಲ, ಅಶ್ರಫ್ ಕೋಡಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್, ಸಾಜಿದ್ ಉಳ್ಳಾಲ, ಅಬ್ಬಾಸ್ ಕೋಟೆಪುರ, ಕೆಎಂಕೆ ಮಂಜನಾಡಿ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.