ADVERTISEMENT

ಭವಿಷ್ಯದ ತಂತ್ರಜ್ಞಾನಗಳಿಗಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸಿ: ಸ್ವಾಮೀಜಿ

‘ಬಿಜಿಎಸ್ ಚುಂಚಾದ್ರಿ ಕುಡ್ಲೋತ್ಸವ’ದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 8:02 IST
Last Updated 16 ಡಿಸೆಂಬರ್ 2025, 8:02 IST
ಮಂಗಳೂರಿನ ಕಾವೂರಿನಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ‘ಬಿಜಿಎಸ್ ಚುಂಚಾದ್ರಿ ಕುಡ್ಲೋತ್ಸವ’ದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಜಿತಕಾಮಾನಂದ ಸ್ವಾಮೀಜಿ ಹಾಗೂ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಿದ್ದರು 
ಮಂಗಳೂರಿನ ಕಾವೂರಿನಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ‘ಬಿಜಿಎಸ್ ಚುಂಚಾದ್ರಿ ಕುಡ್ಲೋತ್ಸವ’ದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಜಿತಕಾಮಾನಂದ ಸ್ವಾಮೀಜಿ ಹಾಗೂ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಿದ್ದರು    

ಮಂಗಳೂರು: ‘ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶದ ಕೊಡುಗೆಯೂ ಇರಬೇಕು. ಕ್ವಾಂಟಮ್ ಸಂಶೋಧನೆಗಳಲ್ಲಿ ನಮ್ಮ ದೇಶವು ಜಗತ್ತಿನಲ್ಲೇ ತಲೆ ಎತ್ತಿ ನಿಲ್ಲಬೇಕಿದೆ. ಇದಕ್ಕೆ ಸನ್ನದ್ಧರಾದ ವಿದ್ಯಾರ್ಥಿಗಳನ್ನು ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ರೂಪಿಸಬೇಕಿದೆ’ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ  ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಗರದ ಕಾವೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ‘ಬಿಜಿಎಸ್ ಚುಂಚಾದ್ರಿ ಕುಡ್ಲೋತ್ಸವ’ದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು. 

‘ಆಧುನಿಕ ಶಿಕ್ಷಣ ಈ ಕಾಲದ ಅನಿವಾರ್ಯ. ಆದರೆ, ಬದುಕಿಗೆ ಅಧ್ಯಾತ್ಮ ಅನಿವಾರ್ಯ. ಮುಂಬರುವ 10–20 ವರ್ಷ ನಂತರದ ಶಿಕ್ಷಣ ಹೇಗಿರುತ್ತದೆ ಎಂಬುದನ್ನು ಈಗಲೇ ಊಹಿಸುವುದು ಕಷ್ಟ. ಎಲ್ಲ ತರಹದ ಸವಾಲುಗಳಿಗೂ ಮಕ್ಕಳನ್ನು ಅಣಿಗೊಳಿಸಬೇಕಿದೆ’ ಎಂದರು.  

ADVERTISEMENT

‘ಬಾಲಗಂಗಾಧರನಾಥ ಸ್ವಾಮೀಜಿ ಅಮೆರಿಕಕ್ಕೆ ತೆರಳಿದ್ದಾಗ, ಅಲ್ಲಿನ ಅಗ್ರ 10 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಕಾಣಸಿಗಲಿಲ್ಲ. ಬುನಾದಿ ಶಿಕ್ಷಣ ಗಟ್ಟಿ ಆಗಿರದ ಕಾರಣ ಇಲ್ಲಿನ ವಿದ್ಯಾರ್ಥಿಗಳು ಅಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಿರಲಿಲ್ಲ. ಆ ಕೊರತೆ ನೀಗಲೆಂದೇ ಸ್ವಾಮೀಜಿ ಬಿಜಿಎಸ್ ಶಿಕ್ಷಣ ಸಂಸ್ಥೆಗಳನ್ನು ಅಲ್ಲಲ್ಲಿ ಕಟ್ಟಿ ಬೆಳೆಸಿದರು. ಅವರು ದೇಹತ್ಯಾಗ ಮಾಡುವ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಶಿಕ್ಷಣ ಸಂಸ್ಥೆಗಳು  1.60 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತಿದ್ದವು. ಬಡವರು ಮಕ್ಕಳು ಶಾಲೆಗಳಿಗೆ ಬರುತ್ತಿರಲಿಲ್ಲ. ಶಿಕ್ಷಣ ಸಮಸ್ಥೆಗಳನ್ನು ಅವರ ಮನೆ ಬಾಗಿಲಿಗೆ  ಒಯ್ಯುವ ಕೆಲಸವನ್ನು ಸ್ವಾಮೀಜಿ ಮಾಡಿದ್ದರು’ ಎಂದರು.  

‘ಪೋಷಕರು ಮಕ್ಕಳನ್ನು ಕಡೆಗಣಿಸಬಾರದು. ಇದು ಭವಿಷ್ಯದಲ್ಲಿ ಮಕ್ಕಳು ತಂದೆ ತಾಯಿಯನ್ನು ಅನಾದರದಿಂದ ಕಾಣಲು ಕಾರಣವಾಗಬಹುದು. ಅಪ್ಪ–ಅಮ್ಮ ಅನ್ಯೋನ್ಯತೆಯಿಂದಿದ್ದು, ಮಕ್ಕಳಿಗೆ ಸಾಧ್ಯವಾದಷ್ಟು ಪ್ರೀತಿ ಕೊಟ್ಟು ಬೆಳೆಸಿದರೆ ಸಾಮರಸ್ಯದ ಸಮಾಜ ತನ್ನಿಂದ ತಾನೆ ನಿರ್ಮಾಣವಾಗುತ್ತದೆ’ ಎಂದರು. 

ಮಂಗಳಾದೇವಿಯ ರಾಮಕೃಷ್ಣ ಮಠದ ಜಿತಕಾಮಾನಂದ ಸ್ವಾಮೀಜಿ, ‘ಮಕ್ಕಳನ್ನು ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಪೋಷಕರ ಜವಾಬ್ದಾರಿ ಮುಗಿಯದು. ಮನೆಯಲ್ಲೂ ಮಕ್ಕಳಿಗೆ ಆಧ್ಯಾತ್ಮಿಕ ಸಂಸ್ಕಾರ ಕೊಡಬೇಕು. ಆ ಸಂಸ್ಕಾರ ಜೀವನ ಪರ್ಯಂತ ಉಳಿಯುತ್ತದೆ’ ಎಂದರು. 

‘ಹಿಡಿದ ಕೆಲಸವನ್ನು ಪಟ್ಟು ಬಿಡದೆ ಪೂರ್ಣಗೊಳಿಸುವ ಇಚ್ಛಾಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಸಮಾಜಕ್ಕೆ, ದೇಶಕ್ಕೆ ಒಳಿತು ಮಾಡುವ, ಕಷ್ಟಗಳನ್ನು ಎದುರಿಸಿ, ಯಾರನ್ನೂ ಅವಲಂಬಿಸದೇ ಬದುಕುವ ಆತ್ಮಶಕ್ತಿಯನ್ನು ಎಳವೆಯಲ್ಲೇ ತುಂಬಬೇಕು’ ಎಂದರು. 

ನಗರದ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಪಾಲನಾಥ ಸ್ವಾಮೀಜಿ, ‘25 ವರ್ಷ ಪೂರೈಸಿದ ಈ ಸಂಸ್ಥೆ ಸಮಾಜಕ್ಕೆ ಅನೇಕ ಸಾಧಕರನ್ನು ನೀಡಿದೆ. ಸಂಸ್ಥೆ ಮೇಲೆ ನಂಬಿಕೆ ಇಟ್ಟು ಮಕ್ಕಳನ್ನು ಕಳುಹಿಸಿಕೊಟ್ಟ ಸ್ಥಳೀಯರ ಪ್ರೋತ್ಸಾಹವೂ ಇದಕ್ಕೆ ಕಾರಣ’ ಎಂದರು.

ಸಿಬಿಎಸ್‌ಇ ಪ್ರಾದೇಶಿಕ ಅಧಿಕಾರಿ ಲಖನ್ ಲಾಲ್ ಮೀನಾ, ‘ಮಕ್ಕಳಿಗೆ ಮೊಬೈಲ್ ಬಳಕೆಗೆ ಅವಕಾಶ ಕೊಡಬೇಡಿ. ವಿದ್ಯಾರ್ಥಿಗಳು ಹೆಚ್ಚು ಭಾಷೆ ಕಲಿತಷ್ಟೂ ಒಳ್ಳೆಯದು. ಇತರ ಭಾಷೆಗಳ ಜೊತೆಗೆ ಇಂಗ್ಲಿಷ್ ಅನ್ನು ಕಲಿಸಲೇ ಬೇಕು’ ಎಂದರು.  

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಆದಿಚುಂಚನಗಿರಿ ಶಾಖಾ ಮಠದ ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು ಭಾಗವಹಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.