
ಪುತ್ತೂರು: ಇಲ್ಲಿನ ಕೋಟಿ-ಚನ್ನಯ ಜೋಡುಕರೆ ಕಂಬಳ ಸಮಿತಿ ಸಾರಥ್ಯದಲ್ಲಿ ಮಹಾಲಿಂಗೇಶ್ವರ ದೇವಳ ಎದುರಿನ ದೇವರಮಾರು ಗದ್ದೆಯಲ್ಲಿ ನಡೆದ 33ನೇ ವರ್ಷದ ಹೊನಲು ಬೆಳಕಿನ ಕೋಟಿ ಚನ್ನಯ ಜೋಡುಕರೆ ಕಂಬಳದಲ್ಲಿ ಹೊಸ ವೇಗದ ದಾಖಲೆ ಸೃಷ್ಟಿಯಾಗಿದೆ.
ಪಂಚಲಿಂಗೇಶ್ವರ ಉರುವಾಲು ನಾರಾಳುಗುತ್ತು ಸದಾನಂದ ಗೌಡ ಅವರ ಕುಟ್ಟಿ-ಕಾಲೆ ಕೋಣಗಳ ಜೋಡಿ ನೇಗಿಲು ಕಿರಿಯ ವಿಭಾಗದಲ್ಲಿ ಅತಿ ವೇಗವಾಗಿ ಓಡಿ ದಾಖಲೆ ಸೃಷ್ಠಿಸಿವೆ. ಈ ಕೋಣಗಳನ್ನು ಓಡಿಸಿದ 22 ವರ್ಷದ ಯುವಕ ಉಡುಪಿ ಪಡುಸಾಂತೂರಿನ ಪೃಥ್ವಿರಾಜ್ ಪೂಜಾರಿ ಅವರು ಕಂಬಳ ಕರೆಯ ವೇಗದ ಓಟಗಾರನಾಗಿ ಹೊರಹೊಮ್ಮಿದ್ದಾರೆ.
ನೇಗಿಲು ಕಿರಿಯ ವಿಭಾಗದಲ್ಲಿ ಸದಾನಂದ ಗೌಡ ಅವರ ಕುಟ್ಟಿ-ಕಾಲೆ ಕೋಣಗಳು 125 ಮೀಟರ್ ಉದ್ದದ ಕರೆಯನ್ನು 10.65 ಸೆಕೆಂಡ್‌ಗಳಲ್ಲಿ ಕ್ರಮಿಸಿವೆ. ಈ ಲೆಕ್ಕಾಚಾರದಂತೆ 100 ಮೀಟರ್ ದೂರವನ್ನು 8.52 ಸೆಕೆಂಡ್‌ಗಳಲ್ಲಿ ತಲುಪಿದಂತಾಗಿದೆ. ತಿಂಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ರಾಮ-ಲಕ್ಷ್ಮಣ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಶ್ರೀಕಾ ಸಂದೀಪ್ ಶೆಟ್ಟಿ ಅವರ ಗಾಂಧಿಮೈದಾನ ಸಂತು ಮತ್ತು ಸುರತ್ಕಲ್ ಪಾಂಚ ಕೋಣಗಳು 125 ಮೀಟರ್ ದೂರವನ್ನು 10.87 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದವು. ಈ ಲೆಕ್ಕಾಚಾರದಂತೆ 100 ಮೀಟರ್ ದೂರವನ್ನು ಆ ಕೋಣಗಳು 8.69 ಸೆಕೆಂಡ್‌ಗಳಲ್ಲಿ ಕ್ರಮಿಸಿದಂತಾಗಿತ್ತು. ಈ ಕೋಣಗಳನ್ನು ಓಡಿಸಿದ್ದ ಕುಂದ ಬಾರಂದಡಿ ಮಾಸ್ತಿಕಟ್ಟೆಯ ಸ್ವರೂಪ್ ಕುಮಾರ್ ಅವರು ವೇಗದ ಓಟಗಾರನಾಗಿ ದಾಖಲೆ ಸೃಷ್ಟಿಸಿದ್ದರು.
2021ರಲ್ಲಿ ಕಕ್ಯಪದವು ಕಂಬಳದಲ್ಲಿ ಮಿಜಾರು ಪ್ರಸಾದ್ ನಿಲಯದ ಶಕ್ತಿ ಪ್ರಸಾದ್ ಅವರ ಮಾಳ ಪುಟ್ಟ ಮತ್ತು ಮಿಜಾರ್ ಅಪ್ಪಿ ಕೋಣಗಳು 125 ಮೀಟರ್ ದೂರವನ್ನು 10.95 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದವು. ಈ ಲೆಕ್ಕಾಚಾರದಂತೆ 100 ಮೀಟರ್ ದೂರವನ್ನು 8.76 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದ ಈ ಕೋಣಗಳನ್ನು ಓಡಿಸಿದ್ದ ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ ಅವರು ಕಂಬಳದ ವೇಗದ ಓಟಗಾರನಾಗಿ ಹೊರಹೊಮ್ಮಿದ್ದರು.
ಪೃಥ್ವಿರಾಜ್ ಅವರು ಉಡುಪಿಯ ಪಡುಸಾಂತೂರಿನ ರಾಮ ಪೂಜಾರಿ ಮತ್ತು ರಂಜನಿ ದಂಪತಿ ಪುತ್ರ. ಡಿಪ್ಲೊಮಾ ಸಿವಿಲ್ ಎಂಜಿನಿಯರಿಂಗ್ ಪದವೀಧರ. ಮನೆಯಲ್ಲಿ ಸಾಕುತ್ತಿರುವ ಕಂಬಳದ ಕೋಣಗಳನ್ನು ಓಡಿಸಿದ ಅನುಭವವೇ ಸಾಧನೆಯ ಮೆಟ್ಟಿಲಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.