ADVERTISEMENT

ಮೌಖಿಕ ಪಠ್ಯದಿಂದ ಇತಿಹಾಸ ಕಟ್ಟುವ ಸಾಧ್ಯತೆ- ನಿವೃತ್ತ ಕುಲಪತಿ ಡಾ. ವಿವೇಕ ರೈ

‘ಕರಾವಳಿ ಕಥನಗಳು’ ಬಿಡುಗಡೆಗೊಳಿಸಿದ ಡಾ. ವಿವೇಕ ರೈ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 13:13 IST
Last Updated 30 ಏಪ್ರಿಲ್ 2022, 13:13 IST
ಮಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ವಿವೇಕ ರೈ ಅವರು ’ಕರಾವಳಿ ಕಥನಗಳು’ ಕೃತಿಯನ್ನು ಬಿಡುಗಡೆಗೊಳಿಸಿ, ಡಾ. ಪ್ರವೀಣ ಮಾರ್ಟಿಸ್ ಅವರಿಗೆ ನೀಡಿದರು.
ಮಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ವಿವೇಕ ರೈ ಅವರು ’ಕರಾವಳಿ ಕಥನಗಳು’ ಕೃತಿಯನ್ನು ಬಿಡುಗಡೆಗೊಳಿಸಿ, ಡಾ. ಪ್ರವೀಣ ಮಾರ್ಟಿಸ್ ಅವರಿಗೆ ನೀಡಿದರು.   

ಮಂಗಳೂರು: ಪಾಡ್ದನ ಎನ್ನುವ ಮೌಖಿಕ ಪಠ್ಯದ ಮೂಲಕ ಕರಾವಳಿ ಇತಿಹಾಸ ಕಟ್ಟಬಹುದು ಎನ್ನುವ ಸಾಧ್ಯತೆಯನ್ನು ‘ಕರಾವಳಿ ಕಥನ’ ಗ್ರಂಥ ಪ್ರಚುರಪಡಿಸುತ್ತದೆ ಎಂದು ನಿವೃತ್ತ ಕುಲಪತಿ ಡಾ. ವಿವೇಕ ರೈ ಅಭಿಪ್ರಾಯಪಟ್ಟರು.

ಸೇಂಟ್ ಅಲೋಶಿಯಸ್ ಪ್ರಕಾಶನ, ವಿಕಾಸ ಮಂಗಳೂರು, ಸೇಂಟ್ ಅಲೋಶಿಯಸ್ ಕಾಲೇಜಿನ ಕನ್ನಡದ ವಿಭಾಗದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಚಿನ್ನಪ್ಪ ಗೌಡ ಅವರ ‘ಕರಾವಳಿ ಕಥನಗಳು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪ್ರಕ್ರಿಯೆ ಯಾವತ್ತೂ ಕ್ರಿಯಾತ್ಮಕವಾಗಿದ್ದರೆ, ಉತ್ಪನ್ನವು ಜಡವಾಗಿರುತ್ತದೆ. ತುಳು ಜಾನಪದವು ಉತ್ಪನ್ನವಾಗಿ ಉಳಿಯುವುದಕ್ಕಿಂತ ಅದೊಂದು ಪ್ರಕ್ರಿಯೆಯಾಗಿರಬೇಕು. ಚಿನ್ನಪ್ಪ ಗೌಡರ ಬರಹಗಳು ಸದಾ ಪ್ರಕ್ರಿಯೆಯ ಸ್ವರೂಪದಲ್ಲಿರುತ್ತವೆ. ಈಗ ಬಿಡುಗಡೆಯಾಗಿರುವ ಕೃತಿ ಸಹ ಪಠ್ಯ, ಕ್ಷೇತ್ರಕಾರ್ಯ, ಸಂದರ್ಶನಗಳ ಮೂಲಕ ಗಟ್ಟಿಯಾದ ಹೂರಣ ಹೊಂದಿದೆ ಎಂದರು.

ADVERTISEMENT

ಕರಾವಳಿಯಲ್ಲಿ ಬಿಡುಗಡೆಯಾಗುವ ಕೃತಿಗಳು ಹೊರಭಾಗ, ಹೊರ ದೇಶಗಳ ಓದುಗರಿಗೆ ತಲುಪುತ್ತಿಲ್ಲ. ಹೊರ ದೇಶದ ಕನ್ನಡಿಗರಿಗೆ ತಲುಪಿಸುವ ನಿಟ್ಟಿನಲ್ಲಿ ಪುಸ್ತಕಗಳಿಗೆ ಡಿಜಿಟಲ್ ರೂಪ ನೀಡಬೇಕು. ಅನಿವಾಸಿ ಕನ್ನಡಿಗರು ಚಂದಾ ನೀಡಿ, ಇ– ಬುಕ್ ಖರೀದಿಸಿ ಓದಲು ಸಾಧ್ಯವಾದರೆ, ಇಲ್ಲಿನ ಸಾಹಿತ್ಯ ಕೃತಿಗಳು ಹೆಚ್ಚು ಜನರನ್ನು ತಲುಪುತ್ತವೆ. ಇಲ್ಲವಾದಲ್ಲಿ ಇಂತಹ ಮಹತ್ವದ ಕೃತಿಗಳು ಇಲ್ಲಿಗೇ ಸೀಮಿತವಾಗುತ್ತವೆ ಎಂದರು.

ನಿವೃತ್ತ ಪ್ರಾಧ್ಯಾಪಕ ತಾಳ್ತಜೆ ವಸಂತ ಕುಮಾರ್ ಮಾತನಾಡಿ, ‘ಮನೋದೂರವನ್ನು ಇಟ್ಟುಕೊಂಡು ತಳಸ್ಪರ್ಶಿಯಾಗಿ ಅಧ್ಯಯನ ಮಾಡುವುದು ಚಿನ್ನಪ್ಪ ಗೌಡರ ವಿಶೇಷತೆಯಾಗಿದೆ. ಪ್ರಸ್ತುತ ಬಿಡುಗಡೆಯಾಗಿರುವ ಕೃತಿಯಲ್ಲೂ ಇದನ್ನು ಢಾಳಾಗಿ ಕಾಣಬಹುದು’ ಎಂದರು.

ಕೃತಿ ಪರಿಚಯಿಸಿದ ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಿತ್ಯಾನಂದ ಶೆಟ್ಟಿ, ‘ಇದೊಂದು ಸಂಶೋಧನಾ ಗ್ರಂಥವಾಗಿದ್ದು, ಕರಾವಳಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ಆಕರ ಗ್ರಂಥವಾಗಲಿದೆ’ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಪ್ರೊ. ಚಿನ್ನಪ್ಪ ಗೌಡ, ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಅಲೋಶಿಯಸ್ ಪ್ರಕಾಶನದ ನಿರ್ದೇಶಕಿ ವಿದ್ಯಾ ವಿನುತಾ ಡಿಸೋಜ ಇದ್ದರು. ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಹಾಲಿಂಗ ಭಟ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.