ಉಜಿರೆ: ವಿದ್ಯೆಯ ಜೊತೆಗೆ ವಿನಯ, ಪ್ರೀತಿ-ವಿಶ್ವಾಸ, ಪರೋಪಕಾರ, ಸೇವಾಕಳಕಳಿ ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರಿನ ಮೇಘವಿ ಮಂಜುನಾಥ ಹೇಳಿದರು.
ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುವಾರ ಗೌರವಿಸಿ ಅವರು ಮಾತನಾಡಿದರು.
‘ಕಾಲೇಜಿನ ವಿದ್ಯಾರ್ಥಿನಿಯಾದ ನಾನು 5 ವರ್ಷಗಳಲ್ಲಿ ಸಿಕ್ಕಿದ ಅವಕಾಶ, ಸೌಲಭ್ಯ ಹಾಗೂ ಗುರು-ಹಿರಿಯರ ಮಾರ್ಗದರ್ಶನದಿಂದ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು. ಸೋಲೇ ಗೆಲುವಿನ ಸೋಪಾನವಾಗಿದ್ದು, ಜೀವನದಲ್ಲಿ ಸೋತಾಗಲೂ ಅಂಜದೆ, ಅಳುಕದೆ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಉನ್ನತ ಸಾಧನೆ ಮಾಡಬೇಕು. ಸದಾ ಧನಾತ್ಮಕ ಚಿಂತನೆಯೊಂದಿಗೆ ಉತ್ತಮ ಕೌಶಲ, ಶಿಸ್ತು ಹಾಗೂ ಸಂಯಮವನ್ನು ಮೈಗೂಡಿಸಿಕೊಂಡರೆ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ. ಯಾವುದೇ ಕಾಯಕದಲ್ಲಿ ಅನಗತ್ಯ ವಿಳಂಬ ಮಾಡುವ ಪ್ರವೃತ್ತಿ ಸಲ್ಲದು’ ಎಂದು ಹೇಳಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಬೆಂಗಳೂರಿನಲ್ಲಿರುವ ಕ್ಷೇಮವನದ ನಿರ್ದೇಶಕಿ ಧರ್ಮಸ್ಥಳದ ಶ್ರದ್ಧಾಅಮಿತ್ ಮಾತನಾಡಿ, ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣದ ಗುರಿಯಾಗಿದ್ದು, ಎಸ್‌ಡಿಎಂ ಕಾಲೇಜಿನಲ್ಲಿರುವ ಎಲ್ಲ ಅವಕಾಶಗಳು ಮತ್ತು ಸೌಲಭ್ಯಗಳ ಸದುಪಯೋಗ ಪಡೆದು ವಿದ್ಯಾರ್ಥಿಗಳು ಆದರ್ಶ ನಾಯಕತ್ವದೊಂದಿಗೆ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಬೇಕು. ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ., ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಪ್ರತಿಭೆ ಮತ್ತು ಕೌಶಲದೊಂದಿಗೆ ವಿದ್ಯಾವಂತರಾಗುವುದರ ಜೊತೆಗೆ ವಿನಯವಂತರೂ ಆಗಬೇಕು. ಸಂಸ್ಕಾರ ಮತ್ತು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿ ಸುದೇಶ್ ಗೌಡ ಸ್ವಾಗತಿಸಿದರು. ಶ್ರವಣಕುಮಾರ್ ವಂದಿಸಿದರು. ಸಿಂಚನ ಕಲ್ಲೂರಾಯ, ಧರಿತ್ರಿ ಭಿಡೆ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.