ಮಂಗಳೂರು: ಕೇರಳದ ಇಬ್ಬರು ಕ್ರೈಸ್ತ ಸನ್ಯಾಸಿನಿಯರ ಮೇಲೆ ಛತ್ತೀಸ್‌ಗಢ ದಾಖಲಿಸಿರುವ ಸುಳ್ಳು ಮೊಕದ್ದಮೆಯನ್ನು ವಾಪಸ್ ಪಡೆಯಬೇಕು ಮತ್ತು ಅವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ, ಕಥೋಲಿಕ್ ಸಭಾದ ನೇತೃತ್ವದಲ್ಲಿ ಸೋಮವಾರ ಇಲ್ಲಿ ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರದ ವಿರುದ್ಧದ ಘೋಷಣೆ ಇರುವ ಬ್ಯಾನರ್ ಹಿಡಿದು ಪ್ರತಿಭಟನಕಾರರು ಮೆರವಣಿಗೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಫಿ ಡಿಕೋಸ್ಟಾ, ಸಣ್ಣ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಅಸಹಿಷ್ಣುತೆ ಹೆಚ್ಚುತ್ತಿದೆ. ಕಾನೂನು ವ್ಯವಸ್ಥೆಗಳ ದುರುಪಯೋಗವಾಗುತ್ತಿದೆ ಎಂದರು.
ಮಂಗಳೂರಿನ ಸಿಆರ್‌ಐ ಮಾಜಿ ಅಧ್ಯಕ್ಷ ಸೆವೆರಿನ್ ಮೆನೆಜಸ್ ಮಾತನಾಡಿ, ಕ್ರಿಶ್ಚಿಯನ್ ಸಂಸ್ಥೆಗಳು ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಉನ್ನತಿಯೊಂದಿಗೆ ದುರ್ಬಲ ವರ್ಗದವರ ಸೇವೆ ಸಲ್ಲಿಸುತ್ತಿವೆ. ನಮ್ಮ ಮೇಲೆ ಬಲವಂತದ ಆರೋಪ ಹೊರಿಸುವುದು ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ದಾಳಿ ಮಾಡಿದಂತೆ ಎಂದರು.
ಬಿಕರ್ನಕಟ್ಟೆಯ ಸೇಂಟ್ ಮೇರಿ ಚರ್ಚ್‌ನ ಪ್ಯಾರಿಷ್ ಪಾದ್ರಿ ಫಾ. ಡೊಮಿನಿಕ್ ವಾಸ್ ಮಾತನಾಡಿ, ‘ನಾವು ಒಂದು ಕೈಯಲ್ಲಿ ಬೈಬಲ್ ಅನ್ನು ಮತ್ತು ಇನ್ನೊಂದು ಕೈಯಲ್ಲಿ ಸಂವಿಧಾನವನ್ನು ಹಿಡಿದಿದ್ದೇವೆ. ನಾವು ದೇಶಭಕ್ತರು, ಮತಾಂಧರಲ್ಲ. ಕ್ರೈಸ್ತ ಸನ್ಯಾಸಿನಿಯರ ಮೇಲೆ ಹೊರಿಸಿರುವ ಆರೋಪವು ಕಟ್ಟು ಕಥೆಯಾಗಿದೆ. ಇದನ್ನು ರದ್ದುಗೊಳಿಸಬೇಕು’ ಎಂದರು.
ಮಾಜಿ ಶಾಸಕ ಜೆ.ಆರ್. ಲೋಬೊ, ಪಾದ್ರಿಗಳು ಮತ್ತು ಸಿಸ್ಟರ್‌ಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.