ADVERTISEMENT

ಮಂಗಳೂರು | ‘ಲಕ್ಕಿ ಸ್ಕೀಮ್’ ವಂಚನೆ: ಸಂತ್ರಸ್ತರ ಪ್ರತಿಭಟನೆ

ಜನರ ದುಡಿಮೆ ಕಿತ್ತುಕೊಂಡ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 8:30 IST
Last Updated 16 ಜನವರಿ 2026, 8:30 IST
ಆಮಿಷ ಒಡ್ಡಿ ಜನರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ವಂಚಿಸುತ್ತಿರುವ ಲಕ್ಕಿ ಸ್ಕೀಮ್ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಂತ್ರಸ್ತರು ಮಂಗಳೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು: ಪ್ರಜಾವಾಣಿ ಚಿತ್ರ
ಆಮಿಷ ಒಡ್ಡಿ ಜನರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ವಂಚಿಸುತ್ತಿರುವ ಲಕ್ಕಿ ಸ್ಕೀಮ್ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಂತ್ರಸ್ತರು ಮಂಗಳೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು: ಪ್ರಜಾವಾಣಿ ಚಿತ್ರ   

ಮಂಗಳೂರು: ಕಂತುಗಳಲ್ಲಿ ಹಣ ಕಟ್ಟಿದವರಿಗೆ ಮನೆ, ಕಾರು, ಚಿನ್ನಾಭರಣ ನೀಡುವ ಆಮಿಷ ಒಡ್ಡಿ ಜನರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ವಂಚಿಸುತ್ತಿರುವ ಅದೃಷ್ಟ ಯೋಜನೆ (ಲಕ್ಕಿ ಸ್ಕೀಮ್) ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ‘ನ್ಯೂ ಇಂಡಿಯಾ ಲಕ್ಕಿ ಸ್ಕೀಮ್’ ಸಂತ್ರಸ್ತರು ಇಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ ಇಮ್ತಿಯಾಜ್, ‘ಭಾರತೀಯ ರಿಸರ್ವ್ ಬ್ಯಾಂಕ್  ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ 100ಕ್ಕೂ ಹೆಚ್ಚು  ಕಂಪೆನಿಗಳು ನಗರದಲ್ಲಿವೆ. ಇವು ಸಾರ್ವಜನಿಕರಿಂದ ಸಾವಿರಾರು ಕೋಟಿ  ರೂಪಾಯಿ ಸಂಗ್ರಹಿಸಿ, ತಮ್ಮ ಕಾರ್ಯ ವ್ಯಾಪ್ತಿಯನ್ನು ಬೇರೆ ಜಿಲ್ಲೆಗಳಿಗೂ ವಿಸ್ತರಿಸಿವೆ.  ಕಾನೂನುಬಾಹಿರವಾಗಿ ಕಾರ್ಯಚರಿಸುತ್ತಿದರುವ ಇಂತಹ ಸಂಸ್ಥೆಗಳ ಕಚೇರಿಗೆ ಬೀಗ ಜಡಿದು,  ಕಠಿಣ ಕಾನೂನು ಕ್ರಮ ಜರಗಿಸಬೇಕು’ ಎಂದು ಒತ್ತಾಯಿಸಿದರು.  

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ‘ಬಡವರ ಅಮಾಯಕತೆ ಹಾಗೂ ಪ್ರಾಮಾಣಿಕತೆಯನ್ನು ಈ ಸಂಸ್ಥೆಗಳು ದುರ್ಬಳಕೆ ಮಾಡುತ್ತಿವೆ.  ಮಕ್ಕಳ ವಿದ್ಯಾಬ್ಯಾಸ, ಹೆಣ್ಣು ಮಕ್ಕಳ ಮದುವೆಗಾಗಿ ದುಡಿಮೆ ಹಣ ಉಳಿತಾಯ ಮಾಡುವ  ಬಡಪಾಯಿಗಳಿಗೆ ಅನ್ಯಾಯ ಮಾಡುತ್ತಿವೆ.  ಪ್ರಭಾವಿ ರಾಜಕಾರಣಿಗಳ ಸಹಕಾರದಿಂದಾಗಿ ಈ ರೀತಿಯ ವಂಚನೆ ಮಾಡಲು ಸಾಧ್ಯವಾಗಿದೆ. ಪೊಲೀಸರು ಮತ್ತು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿದ್ದರೆ  ವಂಚನೆ ತಪ್ಪಿಸಬಹುದಿತ್ತು’ ಎಂದರು.  

ADVERTISEMENT

ಸಿಐಟಿಯು ಮುಖಾಂಡರಾದ ಯೋಗೀಶ್ ಜಪ್ಪಿನಮೊಗರು, ಡಿವೈಎಫ್ಐ ಮುಖಂಡ ತಯ್ಯುಬ್ ಬೆಂಗ್ರೆ, ಸಂತ್ರಸ್ತರ ವೇದಿಕೆಯ ಸಹ ಸಂಚಾಲಕ ಸಮದ್ ಕಾಟಿಪಳ್ಳ ಮಾತನಾಡಿದರು. ವೇದಿಕೆಯ ಪ್ರಮುಖರಾದ ಪರ್ವೀಜ್ ಬಂದರ್, ಖಲೀಲ್ ಬೆಂಗ್ರೆ, ನಟೇಶ್, ರಾಮ್ ಸುರತ್ಕಲ್, ಮನ್ಸೂರ್ ಅಡ್ಡೂರು, ಫಾರೂಕ್ ಕುಕ್ಕಾಜೆ, ಅಬ್ದುಲ್ ಅಜೀಜ್ ಕೃಷ್ಣಾಪುರ, ಖಾಸಿಂ ಕಾಟಿಪಳ್ಳ, ಸನಾ ಮಣಿಪಾಲ, ಜಯಲಕ್ಷ್ಮಿ ಉಳ್ಳಾಲ, ಖೈರುನ್ನಿಸಾ ಉಚ್ಚಿಲ, ಸುಜಾತ ಮಧ್ಯಪದವು, ಸುಹಾನಾ ಬೆಂಗಳೂರು, ಫೈಝಲ್ ಚಿಕ್ಕಮಗಳೂರು, ಮೊಹಮ್ಮದ್ ಪಾಷ ಶಿವಮೊಗ್ಗ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.