ADVERTISEMENT

ಮದ್ಯದಂಗಡಿ ತೆರವಿಗೆ ಆಗ್ರಹ, ಪ್ರತಿಭಟನೆ

ಕೊಲ್ಲಮೊಗ್ರು: ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 7:12 IST
Last Updated 28 ಅಕ್ಟೋಬರ್ 2022, 7:12 IST
ಪ್ರತಿಭಟನಕಾರರು ಪ್ರತಿಕೃತಿ ದಹಿಸಿದರು
ಪ್ರತಿಭಟನಕಾರರು ಪ್ರತಿಕೃತಿ ದಹಿಸಿದರು   

ಸುಬ್ರಹ್ಮಣ್ಯ: ಕೊಲ್ಲಮೊಗ್ರುನಲ್ಲಿ ಅಕ್ರಮ ಮದ್ಯದಂಗಡಿ ತೆರೆಯಲಾಗಿದ್ದು, ಮುಚ್ಚುವಂತೆ ಆಗ್ರಹಿಸಿ ಗ್ರಾಮದ ಮದ್ಯ ಮುಕ್ತ ಗ್ರಾಮ ಹೋರಾಟ ಸಮಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸುಳ್ಯ ತಾಲ್ಲೂಕು, ಶೌರ್ಯಶ್ರೀ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯಗಳ ಆಶ್ರಯದಲ್ಲಿ ಪ್ರತಿಭಟನಾ ಸಭೆ ಕೊಲ್ಲಮೊಗ್ರು ಮಯೂರ ಕಲಾ ಮಂದಿರದಲ್ಲಿ ನಡೆಯಿತು.

ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎ. ರಾಮಚಂದ್ರ ಮಾತನಾಡಿ, ‘ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಶಯದಂತೆ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ, ಅನೇಕರನ್ನು ಮದ್ಯ ಮುಕ್ತರನ್ನಾಗಿಸಿ ಊರನ್ನು ಸುಭೀಕ್ಷೆ ಮಾಡಲು ಇಲ್ಲಿನ ಜನ ಕೈ ಜೋಡಿಸಿದ್ದರು. ಅದರಂತೆ ಇಲ್ಲಿ ಎರಡು ಬಾರಿ ಮದ್ಯವರ್ಜನ ಶಿಬಿರಗಳಾಗಿವೆ. ಈ ಮೂಲಕ ಅನೇಕ ಕುಟುಂಬಗಳು ಹೊಸ ಜೀವನ ನಡೆಸುತ್ತಿವೆ. ಆದರೆ, ಇಲ್ಲಿ ಮದ್ಯದಂಗಡಿ ತೆರೆದಿದ್ದಾರೆ. ಊರವರ ವಿರೋಧ ಕಟ್ಟಿಕೊಂಡು ಮದ್ಯದಂಗಡಿ ತೆರೆದಿರುವುದು ಸರಿಯಲ್ಲ ಎಂಬುದನ್ನು ಅವರು ಯೋಚನೆ ಮಾಡಬೇಕಿತ್ತು. ನೀವಾಗಿಯೇ ತೆರೆದ ಮದ್ಯದಂಗಡಿಯನ್ನು ಶಾಶ್ವತವಾಗಿ ನೀವಾಗಿಯೇ ಮುಚ್ಚಿಸಿ’ ಎಂದರು.

ಮಹೇಶ್ ರೈ ಮೇನಾಲ ಮಾತನಾಡಿ, ಮದ್ಯದಂಗಡಿಗೆ ಸಂಬಂಧಿಸಿದವರು ನಮ್ಮಲ್ಲಿ ಬಿರುಕು ಉಂಟು ಮಾಡುವಂತೆ ಮಾಡಿ ಹೋರಾಟಕ್ಕೆ ಇಳಿಯದಂತೆ ಮಾಡಬಹುದು. ಅದಕ್ಕೆ ನಾವ್ಯಾರೂ ಕಿವಿಗೊಡಬಾರದು ಎಂದರು.

ADVERTISEMENT

ಸುಳ್ಯ ತಾಲ್ಲೂಕು ಜನಜಾಗೃತಿ ವೇದಿಕೆ ಸದಸ್ಯ ಹಿಮ್ಮತ್ ಕೆ.ಸಿ. ಮಾತನಾಡಿ, ಗ್ರಾಮಗಳಲ್ಲಿ ಮದ್ಯದಂಗಡಿ ತೆರೆಯಲು ಗ್ರಾಮ ಪಂಚಾಯಿತಿ ಅನುಮತಿ ಕಡ್ಡಾಯಗೊಳಿಸುವ ಕಾರ್ಯ ನಡೆಯಬೇಕು ಎಂದರು.

ಮೆರವಣಿಗೆ ಸಾಗುವ ಸಂದರ್ಭ ಮದ್ಯದಂಗಡಿ ಮುಚ್ಚಲಾಗಿತ್ತು. ಸುಬ್ರಹ್ಮಣ್ಯ ಪೊಲೀಸರು ಬಂದೋ ಬಸ್ತ್ ಕಲ್ಪಿಸಿದ್ದರು. ಹೋರಾಟ ಸಮಿತಿ ಅಧ್ಯಕ್ಷ ಮಾಧವ ಚಾಂತಾಳ, ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ಪಿ., ಗಿರಿಧರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.