ADVERTISEMENT

ಪ್ರೊಟೊ ದ್ರಾವಿಡಿಯನ್: ಭಾರತೀಯರ 4ನೇ ಮೂಲ ವಂಶ ಪತ್ತೆ

ಕೊರಗರ ಆನುವಂಶಿಕ ಅಧ್ಯಯನ ವೇಳೆ ‘ಪ್ರೊಟೊ ದ್ರಾವಿಡಿಯನ್’ ಮೂಲ ಪತ್ತೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 20:31 IST
Last Updated 5 ನವೆಂಬರ್ 2025, 20:31 IST
<div class="paragraphs"><p>ಪ್ರೊಟೊ ದ್ರಾವಿಡಿಯನ್</p></div>

ಪ್ರೊಟೊ ದ್ರಾವಿಡಿಯನ್

   

ಮಂಗಳೂರು: ಭಾರತದ ಆನುವಂಶಿಕ ಮೂಲದ ಅಧ್ಯಯನನಿರತ ಸಂಶೋಧಕರು ಈ ಹಿಂದಿನ ಸಂಶೋಧನೆ ಪ್ರಕಾರ ಇರುವ ಭಾರತೀಯರ ಮೂರು ಪೂರ್ವಜ ಮೂಲದ ಜೊತೆಗೇ ನಾಲ್ಕನೆಯ ‘ಪ್ರೊಟೊ ದ್ರಾವಿಡಿಯನ್’ ಮೂಲ ವಂಶ ಇರುವುದನ್ನೂ ಪತ್ತೆಮಾಡಿದ್ದಾರೆ.

ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ರಣಜಿತ್ ದಾಸ್, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಣಿ ವಿಜ್ಞಾನ ವಿಭಾಗದ ಮುಖ್ಯಸ್ಥ ಎಂ.ಎಸ್. ಮುಸ್ತಾಕ್, ಸಂಶೋಧಕ ಜೈಸನ್ ಜೀವನ್ ಸೆಕ್ವೇರಾ ನೇತೃತ್ವದಲ್ಲಿ ನಡೆದ ಜೀನ್ ಮಾದರಿಗಳ ಅಧ್ಯಯನದಲ್ಲಿ ಈ ಸಂಗತಿ ಹೊರಹೊಮ್ಮಿದೆ.

ADVERTISEMENT

ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯ ‘ಕೊರಗ’ರ ಆನುವಂಶಿಕ ಅಧ್ಯಯನದ ವೇಳೆ ದೊರೆತ ಮಾಹಿತಿ ಆಧರಿಸಿ ನಾಲ್ಕನೇ ಪೂರ್ವಜ ವಂಶವನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತೀಯರ ಜೀನ್ ಮಾದರಿಗಳ ಬಗ್ಗೆ ಕೈಗೊಂಡ ಸಂಶೋಧನೆ ಪ್ರಕಾರ ಇರಾನಿನ ಪರ್ವತ ಪ್ರದೇಶದ ಪ್ರಾಚೀನ ಕೃಷಿಕರು, ಪ್ಯಾಂಟಿಕ್ ಕ್ಯಾಸ್ಟಿಯನ್ ಮೈದಾನ ಪ್ರದೇಶದ ಪಶುಪಾಲಕರು ಹಾಗೂ ಅಂಡಮಾನ್ ದ್ವೀಪದ ಬೇಟೆಯಾಡುವವರು ಸೇರಿ ಈ ಮೂರು ಸಮುದಾಯಗಳನ್ನು ಆಧುನಿಕ ಭಾರತದ ಪೂರ್ವಜರು ಎಂದು ಹೇಳಲಾಗಿತ್ತು. ಆದರೆ, ಇದು ಅಪೂರ್ಣ ಮಾಹಿತಿಯಾಗಿದೆ. ಪ್ರೊಟೊ ದ್ರಾವಿಡರ ಮೂಲವು ಸಿಂಧೂ ನಾಗರಿಕತೆಯ ಕಾಲದಲ್ಲಿ ಉಗಮವಾಗಿದ್ದು, ಇತರ ಸಮುದಾಯಗಳಿಗಿಂತ ಭಿನ್ನವಾಗಿದೆ. ಈ ಸಮುದಾಯವು ಸುಮಾರು 4,400 ವರ್ಷಗಳ ಹಿಂದೆ ಇರಾನ್ ಸಮತಟ್ಟಿನ ಪ್ರದೇಶ ಮತ್ತು ಸಿಂಧೂ ನದಿ ಪ್ರದೇಶದ ನಡುವೆ ನೆಲೆಸಿತ್ತು ಎಂದು ಸಂಶೋಧಕ ಜೈಸನ್ ಸೆಕ್ವೇರಾ ಅವರು ಹೇಳಿದರು.

ಸ್ವಿಟ್ಜರ್ಲೆಂಡ್‌ನ ಬರ್ನ್ ವಿಶ್ವವಿದ್ಯಾಲಯದ ಪ್ರೊ. ಜಾರ್ಜ್ ವ್ಯಾನ್ ಡ್ರೀಮ್ ಒಳಗೊಂಡ ತಂಡಕ್ಕೆ ಕೊರಗ ಸಮುದಾಯದ ಜನರಿಗೆ ಉತ್ತರ ದ್ರಾವಿಡ ಭಾಷಾ ಸಮುದಾಯದೊಡನೆ ಸಂಬಂಧ ಇರುವುದು ಕಂಡುಬಂದಿತ್ತು ಎಂದು ವಿವರಿಸಿದರು. 

ಕೊರಗ, ಕುರುಖ್ ಮತ್ತು ಬ್ರಾಹುಯಿ ಭಾಷೆಗಳ ನಡುವಿನ ಸಂಬಂಧ ಆಧರಿಸಿ ಅಧ್ಯಯನದ ಆನುವಂಶಿಕ ಮಾದರಿ ರೂಪಿಸಲಾಯಿತು. ಆ ಪ್ರಕಾರ ಪ್ರೊಟೊ ದ್ರಾವಿಡ ಮೂಲವಂಶವು ಇಂದಿನ ಬಹುತೇಕ ಭಾರತೀಯರಲ್ಲಿ ಕಂಡುಬರುತ್ತದೆ. ಆದರೆ, ಪ್ರಾಚೀನ ದಕ್ಷಿಣಭಾರತೀಯ ಮೂಲ ವಂಶದ ಕೆಲ ಬುಡಕಟ್ಟು ಸಮುದಾಯಗಳಲ್ಲಿ ಕಾಣಿಸದು’ ಎಂದು ಹೇಳಿದರು.

‘ಕೊರಗ ಸಮುದಾಯದಲ್ಲಿ ಕಂಡು ಬರುವ ‘ಜೀನ್ ಹ್ಯಾಪ್ಲೊಟೈಪ್’ಗೆ ಅಂತರ್‌ವಿವಾಹ ಪರಿಣಾಮ ಆಗಿರಬಹುದು. ಆನುವಂಶೀಯ ಕಾಯಿಲೆಗಳಿಗೆ ಆಸ್ಪದವಾಗಿರುವ ಆನುವಂಶಿಕ ರೂಪಾಂತರಗಳನ್ನು ಪತ್ತೆ ಹಚ್ಚಲಾಗಿದೆ’ ಎಂದು ರಣಜಿತ್ ದಾಸ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.