ADVERTISEMENT

ರೈತರಿಗೆ ಗುಣಮಟ್ಟದ ಬೀಜ, ಗೊಬ್ಬರ ಪೂರೈಸಿ

ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ: ಸಭೆ ನಡೆಸಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 5:16 IST
Last Updated 18 ಜೂನ್ 2021, 5:16 IST
ಮಂಗಳೂರಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡಿದರು.
ಮಂಗಳೂರಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡಿದರು.   

ಮಂಗಳೂರು: ಜಿಲ್ಲೆಯ ರೈತರ ಅವಶ್ಯಕತೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಪೂರೈಕೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್ ಸೂಚನೆ ನೀಡಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ 2021-22ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ, ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ ಈ ಬಾರಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆಗೆ ಗುರಿ ಹಮ್ಮಿಕೊಳ್ಳಲಾಗಿದೆ. ಎಂಒ–4 ಭತ್ತದ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ಪೂರ್ಣ ಪ್ರಮಾಣದಲ್ಲಿ ಪೂರೈಸಲು ಆಗದೇ ಇರುವ ಸಂದರ್ಭದಲ್ಲಿ ಅದೇ ತಳಿಯ ಇತರೆ ಭತ್ತದ ಬೀಜಗಳನ್ನು ಪೂರೈಸಬೇಕು ಎಂದರು.

ಬಿತ್ತನೆ ಬೀಜ, ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿದರೆ ಅಥವಾ ಸರ್ಕಾರ ನಿಗದಿ ಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದ ಅವರು, ಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಗೊಬ್ಬರದ ದರಗಳನ್ನು ಫಲಕದಲ್ಲಿ ಪ್ರದರ್ಶಿಸಬೇಕು ಎಂದರು.

ಹೋಬಳಿ ಮಟ್ಟದ ಎಲ್ಲ ರೈತ ಸಂಪರ್ಕ ಕೇಂದ್ರಗಳನ್ನು ಲಾಕ್‌ಡೌನ್ ಸಂದರ್ಭಲ್ಲಿಯೂ ನಿಗದಿತ ಅವಧಿಗೆ ತೆರೆದು, ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ಗೊಬ್ಬರ ಮತ್ತಿತರ ಪರಿಕರಗಳನ್ನು ರಿಯಾಯಿತಿ ದರದಲ್ಲಿ ವಿತರಿಸಬೇಕು ಎಂದು ತಿಳಿಸಿದರು.

ಬಿತ್ತನೆ ಬೀಜ ರಸಗೊಬ್ಬರ ಹಾಗೂ ಮತ್ತಿತರ ಪರಿಕರಗಳ ದಾಸ್ತಾನುಗಳ ಬಗ್ಗೆ ರೈತರಿಗೆ ತಿಳಿಸಬೇಕು. ಜೊತೆಗೆ ರೈತ ಮುಖಂಡರ ಸಭೆಗಳನ್ನು ಮಾಡಬೇಕು ಎಂದು ತಿಳಿಸಿದ ಅವರು, ಕೃಷಿ ಪರಿಕರಗಳ ಮಾರಾಟ ಕೇಂದ್ರಗಳಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಎಚ್ಚರ ವಹಿಸಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕಿ ಸೀತಾ ಎಂ.ಸಿ., ಕೃಷಿ ಉಪ ನಿರ್ದೇಶಕ ಭಾನುಪ್ರಕಾಶ್, ಮಂಗಳೂರು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್., ಪುತ್ತೂರು ವಲಯ ಉಪ ಕೃಷಿ ನಿರ್ದೇಶಕ ಶಿವಶಂಕರ ದಾನೇಗೌಡ, ಬಂಟ್ವಾಳ ತಾಂತ್ರಿಕ ಅಧಿಕಾರಿ ನಂದನ್ ಶೆಣೈ, ಪುತ್ತೂರು, ಸುಳ್ಯ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ ಮತ್ತು ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.