ADVERTISEMENT

ಪಂಪ್‌ವೆಲ್‌ ರಸ್ತೆಯ ಗುಂಡಿಗೆ ‘ಪೂಕಳಂ’

ಅಧಿಕಾರಿಗಳ ನಿರ್ಲಕ್ಷಕ್ಕೆ ಓಣಂ ಮೂಲಕ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 3:55 IST
Last Updated 3 ಸೆಪ್ಟೆಂಬರ್ 2020, 3:55 IST
ಮಂಗಳೂರಿನ ಪಂಪ್‌ವೆಲ್‌ನ ರಸ್ತೆ ಗುಂಡಿಗೆ ‘ಪೂಕಳಂ’ ರಚಿಸಿರುವ ರಾಧಿಕಾ ಧೀಮಂತ್‌ ಸುವರ್ಣ
ಮಂಗಳೂರಿನ ಪಂಪ್‌ವೆಲ್‌ನ ರಸ್ತೆ ಗುಂಡಿಗೆ ‘ಪೂಕಳಂ’ ರಚಿಸಿರುವ ರಾಧಿಕಾ ಧೀಮಂತ್‌ ಸುವರ್ಣ   

ಮಂಗಳೂರು: ನಗರದ ಹದಗೆಟ್ಟ ರಸ್ತೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಲೇ ಇವೆ. ಹೆದ್ದಾರಿಗಳು ಅಲ್ಪಮಟ್ಟಿಗೆ ದುರಸ್ತಿಯಾಗಿದ್ದರೆ, ಸರ್ವಿಸ್‌ ರಸ್ತೆಗಳನ್ನು ಸಂಪೂರ್ಣ ಗುಂಡಿಮಯವಾಗಿವೆ. ಇಂತಹ ಗುಂಡಿಗೆ ಓಣಂನ ಪೂಕಳಂ ರಚಿಸುವ ಮೂಲಕ ನಗರದ ಮಹಿಳೆಯೊಬ್ಬರು ವಿನೂತನ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಶೈಕ್ಷಣಿಕ ಸಲಹೆಗಾರ್ತಿ ರಾಧಿಕಾ ಧೀಮಂತ್‌ ಅವರು ಮಂಗಳವಾರ ಓಣಂ ಆಚರಿಸುವ ಮೂಲಕ ಪಂಪ್‌ವೆಲ್‌ ರಸ್ತೆಯಲ್ಲಿರುವ ಗುಂಡಿಗಳ ಸುತ್ತಲೂ ಪೂಕಳಂ ರಚಿಸಿದ್ದಾರೆ. ಪಂಪ್‌ವೆಲ್‌ ಫ್ಲೈಓವರ್‌ ಸಂಪೂರ್ಣವಾಗಲು 10 ವರ್ಷಗಳು ಬೇಕಾಯಿತು. ಇದು ಪೂರ್ಣಗೊಂಡ ಬಳಿಕ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಸರ್ವಿಸ್‌ ರಸ್ತೆಗಳು ಗುಂಡಿಗಳಿಂದ ಕೂಡಿವೆ.

‘ನಾವು ಪಂಪ್‌ವೆಲ್‌ ರಸ್ತೆಯಲ್ಲಿರುವ ಗುಂಡಿಗಳ ಸುತ್ತಲೂಪೂಕಳಂ ಮಾಡುವ ಮೂಲಕ ಓಣಂ ಆಚರಿಸಿದೆವು. ನಾನು ಉದ್ಯೋಗಸ್ಥೆಯಾಗಿದ್ದು, ಈ ರಸ್ತೆಯಲ್ಲಿ ಸಾಕಷ್ಟು ಬಾರಿ ಪ್ರಯಾಣಿಸುತ್ತಿದ್ದೇನೆ. ಅಪಘಾತಗಳಿಗೆ ಕಾರಣವಾಗುವ ಹಲವಾರು ಗುಂಡಿಗಳನ್ನು ಗಮನಿಸಬಹುದಾಗಿದ್ದು, ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ರಾಧಿಕಾ ಸುವರ್ಣ ಹೇಳಿದ್ದಾರೆ.

ADVERTISEMENT

‘ಅಧಿಕಾರಿಗಳು ಮುಖ್ಯ ರಸ್ತೆಯ ಅಭಿವೃದ್ಧಿಯತ್ತ ಮಾತ್ರವೇ ಗಮನ ಹರಿಸುತ್ತಾರೆ. ಆದರೆ, ಸರ್ವಿಸ್‌ ರಸ್ತೆಗಳ ಸ್ಥಿತಿ ಏನು? ಈ ರಸ್ತೆಗಳು ಸಂಪೂರ್ಣವಾಗಿ ನಿರ್ಲಕ್ಷಕ್ಕೆ ಒಳಗಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ’ ಎಂದು ತಿಳಿಸಿದ್ದಾರೆ.

ರಾಧಿಕಾ ಧೀಮಂತ್ ಸುವರ್ಣ ಅವರ ಸ್ನೇಹಿತರಾದ ಯುವಿಕಾ, ಸುಪ್ರಿತಾ ಹಾಗೂ ಮೇಕಪ್ ಕಲಾವಿದ ನೆಲೋಫರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.