ADVERTISEMENT

ಮಂಗಳೂರು | ಬಾಲಕಿಗೆ ಲೈಂಗಿಕ ಕಿರುಕುಳ: ಅಪರಾಧಿಗೆ 3 ವರ್ಷ ಕಠಿಣ ಸಜೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 5:59 IST
Last Updated 5 ಫೆಬ್ರುವರಿ 2026, 5:59 IST
<div class="paragraphs"><p>ಬಂಧನ</p></div>

ಬಂಧನ

   

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿ ಶಂಕರ ಗೌಡ (60) ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತಗತಿ (ಪೊಕ್ಸೊ) ನ್ಯಾಯಾಲಯ–1 ಮೂರು ವರ್ಷಗಳ ಕಠಿಣ ಸಜೆ ವಿಧಿಸಿದೆ.

ಈ ಪ್ರಕರಣದ ಸಂತ್ರಸ್ತೆಗೆ ₹2 ಲಕ್ಷ  ಪರಿಹಾರ ನೀಡಬೇಕು ಎಂದೂ  ನ್ಯಾಯಾಧೀಶರಾದ ಮೋಹನ ಜೆ.ಎಸ್‌ ಅವರು ಮಂಗಳವಾರ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಶಂಕರ ಗೌಡ 2025ರ ಮಾ 21ರಂದು 16 ವರ್ಷದ ಬಾಲಕಿ ಮನೆಯಲ್ಲಿ ಒಬ್ಬಳೇ ಇರುವುದನ್ನು ನೋಡಿ, ಬಲವಂತದಿಂದ ಮನೆಯೊಳಗೆ ನುಗ್ಗಿದ್ದ. ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಬಾಲಕಿ ಆತನ ಕೈಗೆ ಕಚ್ಚಿ ಆತನ ಕಪಿಮುಷ್ಠಿಯಿಂದ ಬಿಡಿಸಿಕೊಂಡಿದ್ದಳು. ಮನೆಯ ಹಿಂಬಾಗಿಲಿನಿಂದ ಓಡಿ ತಪ್ಪಿಸಿಕೊಂಡಿದ್ದಳು. ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ ) ಮತ್ತು ಭಾರತಿಯ  ನ್ಯಾಯ ಸಂಹಿತೆಯ (ಬಿಎನ್‌ಎಸ್‌) ವಿವಿಧ ಸೆಕ್ಷನ್‌ಗಳಡಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಠಾಣೆಯ ಪಿಎಸ್ಐ ಸಮರ್ಥ್ ರವೀಂದ್ರ ಗಾಣಿಗೇರ ಅವರು ಶಂಕರ ಗೌಡ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.  ಪ್ರಕರಣದ ಸಂಬಂಧ ಸರ್ಕಾರಿ ವಕೀಲರಾದ ಸಹನಾದೇವಿ ಅವರು 10 ಸಾಕ್ಷ್ಯಗಳನ್ನು ವಿಚಾರಣೆ ಒಳಪಡಿಸಿದ್ದರು.  

ಅಪರಾಧಿಗೆ ಬಿಎನ್ಎಸ್‌ ಸೆಕ್ಷನ್‌ 74 ರ (ಹಲ್ಲೆ ನಡೆಸಿ ಮಹಿಳೆಯ ಮಾನಭಂಗ ಯತ್ನ) ಅಡಿ  ಮೂರು ವರ್ಷ ಕಠಿಣ ಸಜೆ ಹಾಗೂ ₹ 20 ಸಾವಿರ ದಂಡ. ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 6 ತಿಂಗಳೂ ಕಾರಾಗೃಹವಾಸ ಅನುಭವಿಸಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.  ಬಿಎನ್‌ಎಸ್ ಸೆಕ್ಷನ್‌ 75 (2) ಅಡಿ (ಲೈಂಗಿಕ ಕಿರುಕುಳ) ಶಂಕರನಿಗೆ ಎರಡು ವರ್ಷ ಕಠಿಣ ಸಜೆ ಮತ್ತು ₹ 15 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಅಪರಾಧಿಯು ಮತ್ತೆ ನಾಲ್ಕು ತಿಂಗಳು ಕಾರಾಗೃಹವಾಸ ಅನುಭವಿಸಬೇಕು ಎಂದು ಆದೇಶ ಮಾಡಿದ್ದಾರೆ. ಎಲ್ಲ ಶಿಕ್ಷೆಗಳು ಒಟ್ಟೊಟ್ಟಿಗೆ ಜಾರಿ ಆಗಲಿವೆ. ದಂಡದ ಮೊತ್ತದಲ್ಲಿ ಅಪರಾಧಿಯು ₹ 50ಸಾವಿರವನ್ನು ಸಂತ್ರಸ್ತೆಗೆ ನೀಡಬೇಕು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ₹ 1.50 ಲಕ್ಷ ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.