
ಪುತ್ತೂರು: ಪಕ್ಕದಲ್ಲೇ ನಡೆಯುತ್ತಿರುವ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್ ಕಟ್ಟಡದ ನಿರ್ಮಾಣ ಕಾಮಗಾರಿಯಿಂದ ಕಾಲೇಜು ಕೊಠಡಿಒಳಗೆ ದೂಳು ಬರುತ್ತಿರುವುದರಿಂದ ಪಾಠಕ್ಕೆ ಸಮಸ್ಯೆಯಾಗುತ್ತಿದ್ದು, ಅನಾರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂದು ಆರೋಪಿಸಿ ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಸೋಮವಾರ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಪ್ರತಿಭಟಿಸಿದರು.
ಪುತ್ತೂರಿನ ಹಳೆಯ ತಾಲ್ಲೂಕು ಕಚೇರಿ ಕಟ್ಟಡದಲ್ಲಿ 12 ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಡೆಯುತ್ತಿದ್ದು, ಸರಿಯಾದ ತರಗತಿ ವ್ಯವಸ್ಥೆ ಇಲ್ಲ. ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲ. ತರಗತಿಗಳಿಗೆ ಗಾಳಿ-ಬೆಳಕು ವ್ಯವಸ್ಥೆಯೂ ಇಲ್ಲ. ಶೀಟ್‌ನ ಬಿಸಿಯಿಂದಾಗಿ ತರಗತಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಕಾಲೇಜಿನ ಒಂದು ಭಾಗವನ್ನು ಸರ್ಕಾರಿ ಆಸ್ಪತ್ರೆಗೆ ಬಿಟ್ಟು ಕೊಟ್ಟಿದ್ದು, ಅಲ್ಲಿ ಡಯಾಲಿಸಿಸ್ ಸೆಂಟರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ವೇಳೆ ಏಳುತ್ತಿರುವ ದೂಳಿನಿಂದಾಗಿ ತರಗತಿಯಲ್ಲಿ ಕುಳಿತುಕೊಳ್ಳಲು ತೊಂದರೆಯಾಗುತ್ತಿದ್ದು, ಆರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂದು ಆರೋಪಿಸಿದರು.
ಆರಂಭದಲ್ಲಿ ಬಿಜೆಪಿ ಮುಖಂಡ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಾರೆ ಪ್ರತಿಭಟನಾ ಸ್ಥಳಕ್ಕೆ ಬಂದು ಮಕ್ಕಳ ಸಮಸ್ಯೆ ಆಲಿಸಿದರು.
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಉಪನ್ಯಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಮತ್ತು ಉಪನ್ಯಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.
‘ಸಮಸ್ಯೆಯ ಬಗ್ಗೆ ನನಗೆ ಮಾಹಿತಿ ನೀಡಿದ್ದೀರಾ, ಯಾಕೆ ನೀಡಿಲ್ಲ?’ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿ ಉಪನ್ಯಾಸಕರನ್ನು ತರಾಟೆಗೆತ್ತಿಕೊಂಡರು.
ಕಾಲೇಜಿನಲ್ಲಿ ಇಷ್ಟು ಸಮಸ್ಯೆ ಇರುವಾಗ, ಶಾಸಕರ ಕಚೇರಿ ಹತ್ತಿರದಲ್ಲಿದ್ದರೂ ಯಾಕೆ ಗಮನಕ್ಕೆ ತಂದಿಲ್ಲ. ಮಕ್ಕಳಿಗೆ ಸಮಸ್ಯೆ ಆದಾಗ ಪ್ರಾಂಶುಪಾಲ ಗಮನಿಸಿ, ನನಗೆ ಮಾಹಿತಿ ನೀಡಬೇಕಿತ್ತು, ಈ ರೀತಿ ರಸ್ತೆಯಲ್ಲಿ ಕುಳ್ಳಿರಿಸುವುದೇ?’ ಎಂದು ಅವರು ಪ್ರಶ್ನಿಸಿದರು.
‘ವಿದ್ಯಾರ್ಥಿನಿಯರು ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಪುತ್ತೂರಿಗೆ ಶೋಭೆ ತರುವುಂಥದಲ್ಲ. ಈ ಹಿಂದಿನ ಪ್ರಾಂಶುಪಾಲರು ಉತ್ತಮ ಕೆಲಸ ಮಾಡುತ್ತಿದ್ದರು. ಇವರು ಬಂದ ಬಳಿಕ ಯಾವ ಕೆಲಸವೂ ಆಗುತ್ತಿಲ್ಲ. ಪ್ರತಿ ತಿಂಗಳ ಮಾಹಿತಿ ನೀಡಲು ಹೇಳಿದ್ದರೂ ಅವರು ಮಾಡಿಲ್ಲ’ ಎಂದು ಪ್ರಾಂಶುಪಾಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಏಪ್ರಿಲ್ ಒಳಗೆ ಹೊಸ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಅದರಲ್ಲಿ ತರಗತಿ ಪ್ರಾರಂಭ ಮಾಡಿಕೊಡುವುದಾಗಿ ಶಾಸಕ ಭರವಸೆ ನೀಡಿದ್ದಾರೆ. ಇಲಾಖೆ ನಿಯಮದಂತೆ ವಿದ್ಯಾರ್ಥಿಗಳೂ ಅನುಮತಿ ಪಡೆಯದೆ ರಸ್ತೆಯಲ್ಲಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು. ತರಗತಿಗೆ ತೆರಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತಾರೆ’ ಎಂದು ಎಂದು ಡಿವೈಎಸ್‌ಪಿ ಹೇಳಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂತೆಗೆದುಕೊಂಡರು.
‘ನೀವು ಕ್ಷೇಮಪಾಲನಾಧಿಕಾರಿಯಾಗಿದ್ದರೆ ಸಮಸ್ಯೆಯ ಕುರಿತು ಮಾಹಿತಿ ನೀಡಬೇಕಿತ್ತು. ಯಾಕೆ ನೀಡಿಲ್ಲ?’ ಎಂದು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಉಪನ್ಯಾಸಕರನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ದೂಳಿನ ಸಮಸ್ಯೆಯಿಂದಾಗಿ ಪ್ರತಿ ದಿನ ಮಕ್ಕಳನ್ನು ಆಸ್ಪತ್ರೆಗೆ ಕಳುಹಿಸುತ್ತಿದ್ದೇವೆ. ಇಂದು ವಿದ್ಯಾರ್ಥಿಗಳೇ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಉಪನ್ಯಾಸ ಹೇಳಿದರು.
ಸಮಸ್ಯೆ ಆಗುತ್ತಿದ್ದರೆ ಮಾಹಿತಿ ನೀಡಬೇಕಿತ್ತು. ಇಲ್ಲಿ ಕುಳಿತುಕೊಂಡು ಕಾಲಹರಣ ಮಾಡುವುದಲ್ಲ ಎಂದು ಶಾಸಕ ಪ್ರಾಂಶುಪಾಲೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.