ADVERTISEMENT

ಪುತ್ತೂರು ಬ್ಯಾನರ್‌ ವಿವಾದ: ಹಲ್ಲೆ ಪ್ರಕರಣದಲ್ಲಿ ನಮ್ಮ ಪಕ್ಷದ ಪಾತ್ರ ಇಲ್ಲ ಎಂದ ಕಟೀಲ್‌

​ಪ್ರಜಾವಾಣಿ ವಾರ್ತೆ
Published 28 ಮೇ 2023, 3:20 IST
Last Updated 28 ಮೇ 2023, 3:20 IST
ನಳಿನ್‌ಕುಮಾರ್‌ ಕಟೀಲ್‌
ನಳಿನ್‌ಕುಮಾರ್‌ ಕಟೀಲ್‌   

ಮಂಗಳೂರು: ‘ಪುತ್ತೂರಿನಲ್ಲಿ ಬ್ಯಾನರ್‌ ಹಾಕಿ ನನ್ನನ್ನು ಹಾಗೂ ಸಂಸದ ಸದಾನಂದಗೌಡ ಅವರನ್ನು ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದನ್ನು ನಾನು ಈಗಾಗಲೇ ಖಂಡಿಸಿದ್ದೇನೆ. ಈ ಹಲ್ಲೆ ಪ್ರಕರಣದಲ್ಲಿ ನಮ್ಮ ಪಕ್ಷದ ಯಾವುದೇ ಪಾತ್ರ ಇಲ್ಲ‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

‘ಬ್ಯಾನರ್‌ ಅಳವಡಿಸಿದ ಬಗ್ಗೆ ದೂರು ಕೊಟ್ಟಿದ್ದು ಬಿಜೆಪಿಯಲ್ಲ, ಪುತ್ತೂರು ನಗರಸಭೆಯವರು. ಕಾರ್ಯಕರ್ತರು ತಪ್ಪು ಕಲ್ಪನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಮೇಲೆ ಆರೋಪ ಮಾಡುತ್ತಿರಬಹುದು. ಬಿಜೆಪಿಯವರ ಒತ್ತಡದಿಂದ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಏಟು ತಿಂದವರು ಆರೋಪಿಸಿದ್ದಾರೆಯೇ? ಹಲ್ಲೆ ನಡೆಸುವಂತೆ ಕಾಂಗ್ರೆಸ್‌ನವರೇ ಒತ್ತಡ ಹಾಕಿದ್ದಾರೆ ಎಂದು ನಾವೂ ಆರೋಪ ಮಾಡುತ್ತೇವೆ. ಅವರು ಒಪ್ಪುತ್ತಾರೆಯೇ’ ಎಂದು ಅವರು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಬಂಡಾಯ ಎದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಅರುಣ್‌ ಕುಮಾರ್‌ ಪುತ್ತಿಲ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಪುತ್ತಿಲ ಅವರ ಬಗ್ಗೆ ಗೌರವ ಇದೆ. ಎಲ್ಲ ಭಿನ್ನಾಭಿಪ್ರಾಯಗಳನ್ನು ನಾವು ಸರಿಪಡಿಸಿಕೊಳ್ಳುತ್ತೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.