ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 14:21 IST
Last Updated 15 ಜುಲೈ 2024, 14:21 IST
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿವ ಭಾರಿ ಮಳೆಯಿಂದಾಗಿ ಕುಮಾರಧಾರಾ ನದಿ ಉಕ್ಕಿ ಹರಿದಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನ ಘಟ್ಟ ಸೋಮವಾರ ಮುಳುಗಡೆಯಾಯಿತು
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿವ ಭಾರಿ ಮಳೆಯಿಂದಾಗಿ ಕುಮಾರಧಾರಾ ನದಿ ಉಕ್ಕಿ ಹರಿದಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನ ಘಟ್ಟ ಸೋಮವಾರ ಮುಳುಗಡೆಯಾಯಿತು   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ದಿನಗಳಿಂದ ಬಿರುಸುಗೊಂಡಿರುವ ಮಳೆ  ಮುಂದುವರಿದಿದ್ದು, ಸೋಮವಾರವೂ ಜಿಲ್ಲೆಯಾದ್ಯಂತ ದಿನವಿಡೀ ಉತ್ತಮ ಮಳೆಯಾಗಿದೆ. 

ಭಾನುವಾರ ರಾತ್ರಿಯಿಂದಲೇ ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗಿತ್ತು. ಭಾರಿ ಮಳೆಯ ಮುನ್ಸೂಚನೆ ಇದ್ದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ರೆಡ್‌ ಅಲರ್ಟ್‌ ಘೋಷಿಸಲಾಗಿತ್ತು. ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ  ರಜೆ ಸಾರಲಾಗಿತ್ತು.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ ಉಕ್ಕಿ ಹರಿದು ಸ್ನಾನಘಟ್ಟ ಮುಳುಗಡೆಯಾಗಿತ್ತು. ನದಿಯಲ್ಲಿ ತೀರ್ಥಸ್ನಾನ ಮಾಡದಂತೆ ಯಾತ್ರಿಗಳನ್ನು ನಿರ್ಬಂಧಿಸಲಾಯಿತು. ತೀರ್ಥಸ್ನಾನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು. 

ADVERTISEMENT

ಕಡಬ ತಾಲ್ಲೂಕಿನಾದ್ಯಂತ ಭಾರಿ ಗಾಳಿಮಳೆಯಿಂದಾಗಿ ಬಲ್ಯ ಸರ್ಕಾರಿ ಶಾಲೆಯ ಹೆಂಚುಗಳು ಹಾರಿ ಹೋಗಿವೆ. ಕಟ್ಟಡದ ಚಾವಣಿಯೇ ಕಿತ್ತು ಹೋಗಿದ್ದು, ಕೊಠಡಿಗಳಲ್ಲಿ ಮಳೆ ನೀರು ತುಂಬಿತ್ತು. ಈ ಪರಿಸರದಲ್ಲಿ ಅಡಿಕೆ, ರಬ್ಬರ್, ಬಾಳೆ ಗಿಡಗಳು ನೆಲಕ್ಕೆ ಉರುಳಿವೆ.

ಸೋಮವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪಟ್ರಮೆಯಲ್ಲಿ 12 ಸೆಂ.ಮೀ., ಸುಳ್ಯ ತಾಲ್ಲೂಕಿನ ನೆಲ್ಲೂರು ಕೆಮ್ರಾಜೆ, ದೇವಚಳ್ಳ, ಬಂಟ್ವಾಳ ತಾಲ್ಲೂಕಿನ ಬಾಳೆಪುಣಿಯಲ್ಲಿ ತಲಾ 10 ಸೆಂ.ಮೀ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಕಾಂತಾವರದಲ್ಲಿ 13, ನೀರೆ ಮತ್ತು ರೆಂಜಾಳದಲ್ಲಿ 12, ಮರ್ಣೆಯಲ್ಲಿ 11, ಸಾಣೂರು ಮತ್ತು ಹಿರ್ಗಾನದಲ್ಲಿ ತಲಾ 10, ಹೆಬ್ರಿ ತಾಲ್ಲೂಕಿನ ವರಂಗದಲ್ಲಿ 11, ಉಡುಪಿ ತಾಲ್ಲೂಕಿನ ಮಣಿಪುರ ಮತ್ತು ಕಳತ್ತೂರಿನಲ್ಲಿ 10  ಸೆಂ.ಮೀ. ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌.ಪುರ ತಾಲ್ಲೂಕಿನ ಬಾಳೆಯಲ್ಲಿ 12 ಸೆಂ.ಮೀ. ಮಳೆಯಾಗಿದೆ.

3 ದಿನ ರೆಡ್ ಅಲರ್ಟ್‌: ರಾಜ್ಯದ ಕರಾವಳಿಯಲ್ಲಿ ಇನ್ನೂ ಐದು ದಿನಗಳು ಗುಡುಗಿನಿಂದ ಕೂಡಿದ ಭಾರಿ ಗಾಳಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಇದೇ 16, 17 ಮತ್ತು 18 ರಂದು ರೆಡ್‌ ಅಲರ್ಟ್‌ ಮತ್ತು 19 ಮತ್ತು 20ರಂದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.