ಪುತ್ತೂರು: ರೈತನ ಬದುಕನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಹಕಾರ ಕ್ಷೇತ್ರ ದೊಡ್ಡ ಕೊಡುಗೆ ನೀಡಿದೆ. ಇಂಥ ಸಹಕಾರಿ ಕ್ಷೇತ್ರದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕನ್ನು ಉತ್ತುಂಗಕ್ಕೇರಿಸುವಲ್ಲಿ ಎಂ.ಎನ್.ರಾಜೇಂದ್ರ ಕುಮಾರ್ ಅವರ ಪಾತ್ರ ಮಹತ್ವದ್ದಾಗಿದೆ. ಪ್ರಾಮಾಣಿಕ ಮತ್ತು ಪರಿಣಾಮಕಾರಿ ಸೇವೆಯ ಮೂಲಕ ಅವರು ಸಹಕಾರ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ ಎಂದು ಮುಖಂಡ ಬಿ.ರಮಾನಾಥ ರೈ ಅವರು ಹೇಳಿದರು.
ಪುತ್ತೂರು ಉಪವಿಭಾಗದ ಸಹಕಾರಿ ಬಂಧುಗಳ ಅಭಿನಂದನಾ ಸಮಿತಿ ವತಿಯಿಂದ ಇಲ್ಲಿನ ಬಂಟರ ಭವನದಲ್ಲಿ ಶನಿವಾರ ನಡೆದ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯದ ಎಸ್‌ಸಿಆರ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಎಂ.ಎನ್.ರಾಜೇಂದ್ರಕುಮಾರ್, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಅವರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರ ಸ್ವಚ್ಛತೆ ಇರುವ ಕ್ಷೇತ್ರ. ಇಲ್ಲಿ ಕೆಲಸ ಮಾಡಿದವರಿಗೆ ಸುಲಭವಾಗಿ ಯಶಸ್ಸು ಲಭಿಸುತ್ತದೆ. ಆದರೆ, ಸಹಕಾರಿ ಕ್ಷೇತ್ರ ಬಲಿಷ್ಠವಾಗಿ ಬೆಳೆಯಬೇಕಾದರೆ ಪ್ರಾಮಾಣಿಕತೆ ಮುಖ್ಯ. ಜಿಲ್ಲೆಯ ಎಲ್ಲ ಸಹಕಾರ ಸಂಘಗಳು ಒಳ್ಳೆಯ ಸ್ಥಿತಿಯಲ್ಲಿರಲು ರಾಜೇಂದ್ರಕುಮಾರ್ ಕಾರಣ. ನಾವೆಲ್ಲರೂ ಒಟ್ಟಾಗಿ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಿದಾಗ ಈ ಕ್ಷೇತ್ರ ಇನ್ನಷ್ಟು ಬೆಳೆಯಲು ಸಾಧ್ಯ ಎಂದು ಅವರು ಹೇಳಿದರು.
ಅಭಿನಂದನಾ ಭಾಷಣ ಮಾಡಿದ ಮುಖಂಡ ನಳಿನ್‌ಕುಮಾರ್ ಕಟೀಲ್, ಎಂ.ಎನ್.ರಾಜೇಂದ್ರ ಕುಮಾರ್ ಅವರು ಅವಿಭಜಿತ ಜಿಲ್ಲೆಯ ಏಕೈಕ ಸಾಧನಾ ಶೀಲ ವ್ಯಕ್ತಿ, ನುಡಿದಂತೆ ನಡೆದ ಅಜಾತಶತ್ರು ಸಹಕಾರಿ ಧುರೀಣ ಎಂದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶಾಮ್ ಭಟ್ ಮಾತನಾಡಿ, ಎಂ.ಎನ್.ರಾಜೇಂದ್ರ ಕುಮಾರ್ ಅವರು 3 ದಶಕಗಳಿಂದ ದ.ಕ.ಜಿಲ್ಲೆಯ ಸಹಕಾರ ಕ್ಷೇತ್ರವನ್ನು ಉತ್ತುಂಗಕ್ಕೇರಿಸಿದ್ದು, ಸದಾ ಅಭಿನಂದನೀಯರು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್‌ಕುಮಾರ್ ರೈ ಮಾತನಾಡಿ, ಸಹಕಾರ ಕ್ಷೇತ್ರದ ಅಭಿವೃದ್ಧಿಯ ಜತೆಗೆ ಸಮಾಜ ತಿದ್ದುವ ಕೆಲಸವನ್ನು ರಾಜೇಂದ್ರಕುಮಾರ್ ಮಾಡಿದ್ದಾರೆ ಎಂದರು.
ಮಾಸ್ ಸಂಸ್ಥೆಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಮಾತನಾಡಿದರು.
ರಾಜೇಂದ್ರ ಕುಮಾರ್, ಶಶಿಕುಮಾರ್ ಬಾಲ್ಯೊಟ್ಟು ಅವರನ್ನು ಅಭಿನಂದಿಸಲಾಯಿತು.
ಸಹಕಾರಿ ಯೂನಿಯನ್ ನಿರ್ದೇಶಕರಾಗಿ ಆಯ್ಕೆಯಾದ ವಿಷ್ಣು ಭಟ್ ಮೂಲೆತೋಟ, ಮಂಜುನಾಥ್ ಎನ್.ಎಸ್., ಸತೀಶ್ ಕಾಶಿಪಟ್ನ, ಪ್ರವೀಣ್ ಗಿಲ್ಬರ್ಟ್ ಡಿಸೋಜ ಅವರನ್ನು ಗೌರವಿಸಲಾಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮುಖಂಡ ಸಂಜೀವ ಮಠಂದೂರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಅಭಿನಂದನಾ ಸಮಿತಿಯ ಗೌರವ ಸಲಹೆಗಾರ ನನ್ಯ ಅಚ್ಚುತ ಮೂಡತ್ತಾಯ, ಸಂಚಾಲಕರಾದ ಎಸ್.ಎನ್.ಮನ್ಮಥ, ಕುಶಾಲಪ್ಪ ಗೌಡ ಪೂವಾಜೆ, ಕೋಶಾಧಿಕಾರಿ ಹರೀಶ್ ರೈ ಪಿ., ತಾಲ್ಲೂಕು ಸಂಚಾಲಕರಾದ ಪ್ರಕಾಶ್ಚಂದ್ರ ರೈ ಕೈಕಾರ ಪುತ್ತೂರು, ಸಂತೋಷ್ ಕುತ್ತಮೊಟ್ಟೆ ಸುಳ್ಯ, ಗಣೇಶ್ ಉದ್ದನಡ್ಕ ಕಡಬ, ರಾಘವೇಂದ್ರ ನಾಯಕ್ ಬೆಳ್ತಂಗಡಿ ಭಾಗವಹಿಸಿದ್ದರು.
ಅಭಿನಂದನಾ ಸಮಿತಿ ಅಧ್ಯಕ್ಷ, ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳಜ್ಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪೇಕ್ಷಾ ಪೈ ಪ್ರಾರ್ಥಿಸಿದರು. ಕಾರ್ಯದರ್ಶಿ ಜಯಪ್ರಕಾಶ್ ರೈ ಸಿ.ವಂದಿಸಿದರು. ರಾಕೇಶ್ ರೈ ಕೆಡೆಂಜಿ ಮತ್ತು ಚಂದ್ರಶೇಖರ್ ನಿರೂಪಿಸಿದರು.
ಜಿಲ್ಲೆಯ ಸಹಕಾರಗಳಿಂದಾಗಿ ನನಗೆ ಗೌರವ: ಸನ್ಮಾನ ಸ್ವೀಕರಿಸಿದ ಎಂ.ಎನ್.ರಾಜೇಂದ್ರಕುಮಾರ್ ಮಾತನಾಡಿ, ಯಾವುದೇ ಒಳ್ಳೆಯ ಕೆಲಸವನ್ನು ಧೈರ್ಯದಿಂದ ಮಾಡಬೇಕು. ಎದುರಾಗುವ ಅಡೆ-ತಡೆಗಳನ್ನು ಮೆಟ್ಟಿನಿಂತರೆ ಮಾತ್ರ ಯಾವುದೇ ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯ. ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗುವುದು ತಪ್ಪು. ಈ ಪ್ರಶಸ್ತಿಗೆ ಕಾರಣಕರ್ತ ನಾನಲ್ಲ. ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರವನ್ನು ಬೆಳೆಸಿದ್ದರಿಂದಾಗಿಯೇ ನನಗೆ ಗೌರವ, ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಆದ್ಯತೆ ಸಿಗುವಂತಾಗಿದೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಇರಬಾರದು. ಸಹಕಾರಿ ಕ್ಷೇತ್ರದಲ್ಲಿ ಆದಷ್ಟು ಮಟ್ಟಿಗೆ ಚುನಾವಣೆಗಳಾಗದಂತೆ ನಾವು ನೋಡಿಕೊಳ್ಳುತ್ತಿದ್ದೇವೆ. ಹಾಗಾಗಿಯೇ ಇಲ್ಲಿ ಸಹಕಾರ ಕ್ಷೇತ್ರ ಸದೃಢವಾಗಿದೆ. ಸಹಕಾರಿ ಕಾಯ್ದೆಗೆ ತಿದ್ದುಪಡಿ ಮಾಡಿ ಸಹಕಾರ ಸಂಘಗಳಿಗೆ ನಾಮನಿರ್ದೇಶನ ಮಾಡುವ, ಸಹಕಾರಿ ಸಂಘಗಳ ಸಿಬ್ಬಂದಿಯ ವರ್ಗಾವಣೆ ಮಾಡುವ ವಿಚಾರಕ್ಕೆ ನಮ್ಮ ವಿರೋಧವಿದೆ. ಈ ವಿಚಾರಕ್ಕೆ ಸಂಬಂಧಿಸಿ ಇಲ್ಲಿನ ಸಹಕಾರಿಗಳೇ ಕಾನೂನು ಹೋರಾಟ ಮಾಡುತ್ತಾರೆ. ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.