ADVERTISEMENT

ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್‌ಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 8:53 IST
Last Updated 28 ಅಕ್ಟೋಬರ್ 2020, 8:53 IST
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ (ರಿ) ಪದಾಧಿಕಾರಿಗಳು
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ (ರಿ) ಪದಾಧಿಕಾರಿಗಳು   

ಉಜಿರೆ: ಹೇರಳ ಹಣ ವೆಚ್ಚಮಾಡಿ ಹೊಸ ದೇವಸ್ಥಾನಗಳ ನಿರ್ಮಾಣಕ್ಕಿಂತ ಐತಿಹಾಸಿಕ ಹಿನ್ನೆಲೆಯ ಪುರಾತನ ದೇಗುಲಗಳ ರಕ್ಷಣೆಯ ಕಾರ್ಯ ಹೆಚ್ಚು ಮಹತ್ವಪೂರ್ಣವಾದದ್ದು ಎಂಬ ಆಶಯದೊಂದಿಗೆ 1991ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷರಾಗಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ (ರಿ) ಪ್ರಾರಂಭಿಸಲಾಯಿತು.

ರಾಜ್ಯದ 25 ಜಿಲ್ಲೆಗಳಲ್ಲಿ ಈವರೆಗೆ ಒಟ್ಟು 253 ದೇವಾಲಯಗಳು ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾರ್ಯಕ್ಕಾಗಿ ₹29.34 ಕೋಟಿ ವಿನಿಯೋಗಿಸಲಾಗಿದೆ. ಇದರಲ್ಲಿ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ₹10.46 ಕೋಟಿ, ಸರ್ಕಾರದ ವತಿಯಿಂದ ₹9 ಕೋಟಿ, ದೇವಾಲಯ ಸಮಿತಿಯಿಂದ ₹9.88 ಕೋಟಿ ವಿನಿಯೋಗಿಸಲಾಗಿದೆ.

ಸರ್ಕಾರದ ಸಹಭಾಗಿತ್ವದೊಂದಿಗೆ ಸಂರಕ್ಷಿಸಿದ ಸ್ಮಾರಕಗಳು: 176. 2019 - 20 ರ ಸಾಲಿನಲ್ಲಿ 12 ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ಕಾಗಿ ₹17.65 ಕೋಟಿಯ ವೆಚ್ಚದ ಯೋಜನೆ ರೂಪಿಸಲಾಗಿದೆ.

ಧರ್ಮೋತ್ಥಾನ ಟ್ರಸ್ಟ್ ಆಡಳಿತ ಮಂಡಳಿ: ಡಿ. ವೀರೇಂದ್ರ ಹೆಗ್ಗಡೆ (ಅಧ್ಯಕ್ಷರು), ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರಕುಮಾರ್, ಡಿ. ಹರ್ಷೇಂದ್ರಕುಮಾರ್ (ಸದಸ್ಯರು),ನೇಮಿರಾಜ ಜೈನ್ (ನಿರ್ದೇಶಕರು) ಎ.ವಿ ಶೆಟ್ಟಿ (ಕಾರ್ಯದರ್ಶಿ) ಕಳೆದ 12 ವರ್ಷಗಳಲ್ಲಿ ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ ಹರಿರಾಮಶೆಟ್ಟಿ ನಿರ್ದೇಶಕರಾಗಿ ಸೇವೆ ನೀಡಿದ್ದಾರೆ. ಅವರ ಸ್ವಯಂ ನಿವೃತ್ತಿ ಬಳಿಕ ಪ್ರಸ್ತುತ ನೇಮಿರಾಜ್ ಜೈನ್ ನಿರ್ದೇಶಕರಾಗಿದ್ದಾರೆ.

2003ರಿಂದ ರಾಜ್ಯ ಸರ್ಕಾರವೂ ಸ್ಮಾರಕಗಳ ಸಂರಕ್ಷಣಾ ಕಾರ್ಯದಲ್ಲಿ ಸಹಭಾಗಿತ್ವ ನೀಡುತ್ತಿದೆ. ಒಟ್ಟು ವೆಚ್ಚದಲ್ಲಿ ಶೇಕಡಾ 40 ಧರ್ಮೋತ್ಥಾನ ಟ್ರಸ್ಟ್, ಶೇಕಡ 40 ಕರ್ನಾಟಕ ಸರ್ಕಾರ ಹಾಗೂ ಶೇಕಡ 20 ನ್ನು ದೇವಾಲಯದ ಸಮಿತಿಯವರು ಭರಿಸಬೇಕು.
ಜೀರ್ಣೋದ್ಧಾರದ ಬಳಿಕ ದೇವಸ್ಥಾನದ ನಿರ್ವಹಣೆಯನ್ನು ಆಯಾ ಊರಿನ ಸಮಿತಿಯವರಿಗೆ ಬಿಟ್ಟು ಕೊಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.