ADVERTISEMENT

ರಾಮಾಶ್ರಮ ಪಿ.ಯು ಕಾಲೇಜಿನಲ್ಲಿ ಸಿ.ಎ, ಸಿ.ಎಸ್.,ತರಬೇತಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 5:50 IST
Last Updated 11 ಜನವರಿ 2023, 5:50 IST
ಸುದ್ದಿಗೋಷ್ಠಿಯಲ್ಲಿ ಕಿಶೋರ್‌ ಮಾತನಾಡಿದರು. ನಾರಾಯಣ ಕಾಯರ್‌ಕಟ್ಟೆ, ಗೋಪಾಲಕೃಷ್ಣ ಭಟ್‌ ಹಾಗೂ ಗಿರೀಶ್‌ ಇದ್ದಾರೆ– ಪ್ರಜಾವಾಣಿ ಚಿತ್ರ
ಸುದ್ದಿಗೋಷ್ಠಿಯಲ್ಲಿ ಕಿಶೋರ್‌ ಮಾತನಾಡಿದರು. ನಾರಾಯಣ ಕಾಯರ್‌ಕಟ್ಟೆ, ಗೋಪಾಲಕೃಷ್ಣ ಭಟ್‌ ಹಾಗೂ ಗಿರೀಶ್‌ ಇದ್ದಾರೆ– ಪ್ರಜಾವಾಣಿ ಚಿತ್ರ   

ಮಂಗಳೂರು: ‘ನಗರದ ಕೊಂಚಾಡಿಯ ಶ್ರೀರಾಮಾಶ್ರಮ ಪದವಿಪೂರ್ವ ಕಾಲೇಜನ್ನು ತೃಷಾ ಸಂಸ್ಥೆಯ ಸಹಯೋಗದಲ್ಲಿ ಪುನಶ್ಚೇತನಗೊಳಿಸಲಾಗುತ್ತಿದ್ದು, ಲೆಕ್ಕ ಪರಿಶೋಧಕ (ಸಿ.ಎ) ಹಾಗೂ ಕಂಪನಿ ಸೆಕ್ರೆಟರಿ ಪರೀಕ್ಷೆಗಳಿಗೆ (ಸಿ.ಎಸ್‌) ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ’ ಎಂದು ಕಾಲೇಜಿನ ವ್ಯವಸ್ಥಾಪನಾ ಟ್ರಸ್ಟ್‌ನ ಕಾರ್ಯದರ್ಶಿ ಕಿಶೋರ್‌ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಶ್ರೀರಾಮಾಶ್ರಮ ಪ್ರಾಥಮಿಕ ಶಾಲೆ 1916ರಲ್ಲಿ, ಪದವಿ ಪೂರ್ವ ಕಾಲೇಜು 2001ರಲ್ಲಿ ಸ್ಥಾಪನೆಯಾಗಿದೆ. ಕೋವಿಡ್‌ ಲಾಕ್‌ಡೌನ್ ಬಳಿಕ ವಿದ್ಯಾರ್ಥಿಗಳಿಲ್ಲದೇ ಕಾಲೇಜು ಮುಚ್ಚುವ ಹಂತ ತಲುಪಿತ್ತು. ಕಾಲೇಜನ್ನು ನಿರ್ವಹಿಸಲು ತೃಷಾ ಸಂಸ್ಥೆ ಮುಂದೆ ಬಂದಿದೆ. ಐದು ವರ್ಷಗಳ ಅವಧಿಗೆ ಕಾಲೇಜನ್ನು ನಿರ್ವಹಿಸುವ ಕುರಿತು ತೃಷಾ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ’ ಎಂದರು.

ತೃಷಾ ಸಂಸ್ಥೆಯ ಗೋಪಾಲಕೃಷ್ಣ ಭಟ್‌, ‘ವಾಣಿಜ್ಯ ವಿಷಯಕ್ಕೆ ಸಂಬಂಧಿಸಿ ಪಿಯು. ಹಂತದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶ. ಕಾಲೇಜಿನ ಹೆಸರನ್ನು ನಾವು ಬದಲಾಯಿಸುವುದಿಲ್ಲ. ಶಿಕ್ಷಕರನ್ನು ಸಂಸ್ಥೆಯ ವತಿಯಿಂದಲೇ ನೇಮಿಸಲಿದ್ದೇವೆ. 2023–24ನೇ ಸಾಲಿಗೆ ಪ್ರವೇಶಾತಿ ಆರಂಭವಾಗಲಿದೆ. ಸಿ.ಎ ಹಾಗೂ ಸಿ.ಎಸ್‌ ಪರೀಕ್ಷಾ ತಯಾರಿ ತರಬೇತಿ ಬಯಸುವ ವಿದ್ಯಾರ್ಥಿಗಳು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡುತ್ತೇವೆ’ ಎಂದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ನಗರದ ತೃಷಾ ಪದವಿ ಕಾಲೇಜಿನ ಪ್ರಾಂಶುಪಾಲ ಗಿರೀಶ್‌, ಕಾಲೇಜಿನ ಆಡಳಿತ ಮಂಡಳಿಯ ನಾರಾಯಣ ಕಾಯರ್‌ಕಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.