ADVERTISEMENT

ಮಂಗಳೂರು | ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಿರುಕುಳ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 5:10 IST
Last Updated 4 ಸೆಪ್ಟೆಂಬರ್ 2025, 5:10 IST
ಸುದ್ದಿಗೋಷ್ಠಿಯಲ್ಲಿ ದೀಪಾ ನಾಯಕ್ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ದೀಪಾ ನಾಯಕ್ ಮಾತನಾಡಿದರು   

ಮಂಗಳೂರು: ‘ಕಟೀಲಿನ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಇತ್ತೀಚೆಗೆ ಗ್ರಾಹಕರೊಬ್ಬರು ಗೋಣಿಚೀಲ ಉಚಿತವಾಗಿ ನೀಡುವಂತೆ ಒತ್ತಾಯಿಸಿ, ಬೆದರಿಸಿ ವಿಡಿಯೊ ಚಿತ್ರೀಕರಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅಂಗಡಿಯ ಮಾಲೀಕರಿಗೆ ಕಿರುಕುಳ ನೀಡಿದ ಗ್ರಾಹಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಆ ವಿಡಿಯೊವನ್ನು ಡಿಲೀಟ್ ಮಾಡಿಸಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಪಡಿತರ ವಿತರಕರ ಸಂಘ ಆಗ್ರಹಿಸಿದೆ.

ಆ ವಿಡಿಯೊ ನೋಡಿ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಗ್ರಾಹಕರು ನ್ಯಾಯಬೆಲೆ ಅಂಗಡಿಯವರಿಗೆ ತೊಂದರೆ ಕೊಡುತ್ತಿದ್ದಾರೆ. ನ್ಯಾಯಬೆಲೆ ಅಂಗಡಿ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡಿದೆ. ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ಪ್ರತಿ ಕ್ವಿಂಟಲ್‌ಗೆ ಲಾಭಾಂಶವನ್ನು ₹56 ನಿಗದಿ ನಿಗದಿಪಡಿಸಿದ್ದು, ಈ ಪೈಕಿ ₹36 ನಗದು ಹಾಗೂ ₹20 ಪ್ರತಿ ಕ್ವಿಂಟಲ್‌ನ ಎರಡು ಗೋಣಿಚೀಲದ ರೂಪದಲ್ಲಿ ಪಡೆದುಕೊಳ್ಳುವಂತೆ ಸರ್ಕಾರದ ಆದೇಶದಲ್ಲೇ ಉಲ್ಲೇಖವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೇಶವಮೂರ್ತಿ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಗೋಣಿಚೀಲವನ್ನು ಉಚಿತವಾಗಿ ಕೊಡುವಂತಿಲ್ಲ. ಈ ಬಗ್ಗೆ ತಿಳಿವಳಿಕೆ ಇಲ್ಲದ ಗ್ರಾಹಕರು ಅಂಗಡಿ ಮಾಲೀಕರನ್ನು ಬೆದರಿಸುತ್ತಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಪಡಿತರ ವಿತರಕರಿಗೆ ಕಮಿಷನ್ ನೀಡದೆ ನಾಲ್ಕು ತಿಂಗಳಾಗಿದ್ದು, ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಕಟೀಲು ಪಡಿತರ ಅಂಗಡಿಯ ದೀಪಾ ನಾಯಕ್ ಮಾತನಾಡಿ,‘ಕಟೀಲು ಸಮೀಪದ ಸಹೋದರರಿಬ್ಬರು ಅಕ್ಕಿ ತೆಗೆದುಕೊಂಡು ಹೋಗಲು ಬರುವಾಗ ಗೋಣಿಚೀಲ ಉಚಿತವಾಗಿ ನೀಡುವಂತೆ ಗಲಾಟೆ ಮಾಡುತ್ತಾರೆ. ಇತ್ತೀಚೆಗೆ ಇದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಇದರಿಂದ ನಾನು ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇನೆ. ಈ ಬಗ್ಗೆ ಆಹಾರ ಸಚಿವರು, ಆಹಾರ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿದ್ದೇನೆ. ವಿಡಿಯೊ ಡಿಲೀಟ್ ಮಾಡಿಸುವಂತೆ ಬಜಪೆ ಠಾಣೆಗೆ ಆಗಸ್ಟ್ 22ರಂದು ದೂರು ನೀಡಿದ್ದರೂ, ಇದುವರೆಗೆ ಕ್ರಮ ಆಗಿಲ್ಲ’ ಎಂದು ಹೇಳಿದರು.

ಸಂಘದ ಪದಾಧಿಕಾರಿಗಳಾದ ಭಾಸ್ಕರ್ ಸಾಲ್ಯಾನ್, ರೋಜ್ ಡಿ.ಎಂ., ಮಂಜುನಾಥ ನಾಯಕ್, ದೀಪಾ ನಾಯಕ್, ಮಹಮ್ಮದ್ ರಫೀಕ್, ನಿತ್ಯಾನಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.