ADVERTISEMENT

ಕರಾವಳಿಯಲ್ಲಿ ಮುಂದುವರಿದ ಮಳೆ: ಇಂದು, ನಾಳೆ ‘ರೆಡ್‌ ಅಲರ್ಟ್‌’

ಕಟ್ಟೆಚ್ಚರ ವಹಿಸಲು ಹವಾಮಾನ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 2:41 IST
Last Updated 11 ಸೆಪ್ಟೆಂಬರ್ 2020, 2:41 IST
ಮಂಗಳೂರಿನಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಗೆ ಜನವಸತಿ ಪ್ರದೇಶಗಳಿಗೆ ನುಗ್ಗಿರುವ ಮಳೆ ನೀರು
ಮಂಗಳೂರಿನಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಗೆ ಜನವಸತಿ ಪ್ರದೇಶಗಳಿಗೆ ನುಗ್ಗಿರುವ ಮಳೆ ನೀರು   

ಮಂಗಳೂರು: ಕರಾವಳಿಯಲ್ಲಿ ಸೆಪ್ಟೆಂಬರ್‌ 11 ಮತ್ತು 12 ರಂದು ವ್ಯಾಪಕ ಮಳೆ (ಸುಮಾರು 20.45 ಸೆಂ.ಮೀ.) ಸುರಿಯುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ‘ರೆಡ್‌ ಅಲರ್ಟ್‌’ ಘೋಷಿಸಿದೆ.

ಈ ಅವಧಿಯಲ್ಲಿ ಸಾರ್ವಜನಿಕರು ನದಿ, ಸಮುದ್ರಕ್ಕೆ ಇಳಿಯಬಾರದು. ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಕೆಳಗೆ ನಿಲ್ಲದೇ ಸುರಕ್ಷಿತ ಸ್ಥಳದಲ್ಲಿ ಇರಬೇಕು ಎಂದು ಸೂಚನೆ ನೀಡಲಾಗಿದೆ.

ಜಿಲ್ಲಾ, ತಾಲ್ಲೂಕು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಕರಣಿಕರು ಕೇಂದ್ರ ಸ್ಥಾನದಲ್ಲಿ ಇರಬೇಕು. ಯಾವುದೇ ಘಟನೆಗಳಿಗೂ ತಕ್ಷಣವೇ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ADVERTISEMENT

ಹೆಚ್ಚಿನ ಮಾಹಿತಿಗೆ ಸಹಾಯವಾಣಿ 1077 ಅಥವಾ 94839 08000 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಸಾಧಾರಣ ಮಳೆ

ಬಂಟ್ವಾಳ: ತಾಲ್ಲೂಕಿನ ವಿವಿಧೆಡೆ ಬುಧವಾರ ಸಂಜೆ ದಿಢೀರ್ ಗಾಳಿ ಮಳೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.

ಗುರುವಾರ ಬೆಳಿಗ್ಗೆ ಕೆಲವೆಡೆ ಸಾಧಾರಣ ಮಳೆ ಸುರಿಯಿತು. ಇಲ್ಲಿನ ಕೆಲವೊಂದು ರಸ್ತೆಗಳಲ್ಲಿ ಹೊಂಡ ಮುಚ್ಚುವ ಮತ್ತು ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ರಸ್ತೆ ಬದಿಗಳಲ್ಲಿ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ತುಂಬಿಕೊಂಡು ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.