
ಮಂಗಳೂರು: ರಾಜಧನ ಇಳಿಕೆಯ ಬಳಿಕ ಜಿಲ್ಲೆಯಲ್ಲಿ ಕೆಂಪುಕಲ್ಲು ಇಟ್ಟಿಗೆ ದರ ಕಡಿಮೆಯಾಗಿದೆ. ಕೆಂಪು ಕಲ್ಲು ಗಣಿಗಾರಿಕೆಗೆ ಪರವಾನಗಿಗಳ ಸಂಖ್ಯೆ ಹೆಚ್ಚಾದಂತೆ ದರ ಮತ್ತಷ್ಟು ಕಡಿಮೆಯಾಗಲಿದೆ ಎಂದು ದಕ್ಷಿಣ ಕನ್ನಡ ಕೆಂಪುಕಲ್ಲು ಪಾಯ ಮತ್ತು ಲಾರಿ ಮಾಲೀಕರ ಸಂಘ ಹೇಳಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಸಂಘದ ಅಧ್ಯಕ್ಷ ಸತೀಶ ಆಚಾರ್ಯ, ‘ಐದು ವರ್ಷಗಳ ಹಿಂದೆ ಜಿಲ್ಲೆಯಲ್ಲಿ 242 ಕಡೆ ಕೆಂಪುಕಲ್ಲು ತೆಗೆಯಲಾಗುತ್ತಿತ್ತು. ನಿಯಮಗಳು ಈಗಿನಷ್ಟು ಕಟ್ಟುನಿಟ್ಟು ಇರಲಿಲ್ಲ. ಈಗ ಕೆಂಪುಕಲ್ಲು ತೆಗೆಯುವ ಜಾಗವನ್ನು ಜಿಪಿಎಸ್ ಆಧಾರದಲ್ಲಿ ಗುರುತಿಸುವುದು ಕಡ್ಡಾಯ. ಹಿಂದೆ ಪರವಾನಗಿ ಪಡೆದ ಜಾಗದಲ್ಲಿ ಗುಣಮಟ್ಟದ ಕೆಂಪುಕಲ್ಲು ಸಿಗದಿದ್ದರೆ, ಅಕ್ಕಪಕ್ಕದಲ್ಲೂ ಕೆಂಪುಕಲ್ಲು ತೆಗೆಯಲಾಗುತ್ತಿತ್ತು. ಈಗ ಅದಕ್ಕೆ ಅವಕಾಶವಿಲ್ಲ. ನಿಯಮ ಉಲ್ಲಂಘನೆಗೆ ಶುಲ್ಕದ 15 ಪಟ್ಟು ದಂಡ ಕಟ್ಟಬೇಕಾಗುತ್ತದೆ’ ಎಂದರು.
‘ಜಿಲ್ಲೆಯಲ್ಲಿ 243 ಕಡೆ ಕೆಂಪುಕಲ್ಲು ತೆಗೆಯುವಾಗ ಪ್ರತಿ ಇಟ್ಟಿಗೆಗೆ ₹35 ಸಾವಿರ ದರ ಇತ್ತು. ಕೆಂಪುಕಲ್ಲು ತೆಗೆಯುವ ಪ್ರಕ್ರಿಯೆ ಸ್ಥಗಿತವಾದಾಗ ಮಾತ್ರ ಕೆಂಪುಕಲ್ಲು ಇಟ್ಟಿಗೆ ದರ ₹ 60ಕ್ಕೆ ತಲುಪಿತ್ತು. ಈಗ ಪ್ರತಿ ಇಟ್ಟಿಗೆ ದರ ಹೆಚ್ಚೆಂದರೆ ₹ 45ರಷ್ಟಿದೆ. ಎಕರೆಗೆ 50 ಲಕ್ಷ ಕೊಟ್ಟರೂ ಕೆಂಪುಕಲ್ಲು ಲಭ್ಯವಿರುವ ಜಾಗ ಸಿಗದು. ಭೋಗ್ಯಕ್ಕೆ ಜಾಗ ಪಡೆದು ಕಲ್ಲು ತೆಗೆಯುವುದಕ್ಕೂ ಎಕರೆಗೆ ₹ 30 ಲಕ್ಷ ಪಾವತಿಸಬೇಕಾಗುತ್ತದೆ. ಜಿಲ್ಲೆಯ ಬಹುತೇಕ ಕ್ವಾರಿಗಳ ಒಟ್ಟು ಜಾಗದಲ್ಲಿ ಈ ಹಿಂದೆ ಶೇ 90ರಷ್ಟು ಇಟ್ಟಿಗೆ ಸಿಗುತ್ತಿದ್ದವು. ಈಗ ಶೇ 65ರಷ್ಟು ಸಿಕ್ಕಿದರೆ ಹೆಚ್ಚು. ಈ ನಷ್ಟವನ್ನೂ ನಾವೇ ಭರಿಸಬೇಕು. ಕಲ್ಲುತೆಗೆದ ಗುಂಡಿಗೆ ಮಣ್ಣು ತುಂಬಿಸಬೇಕು. ದರ ಹೆಚ್ಚಾಗಲೂ ಇವೆಲ್ಲವೂ ಕಾರಣ’ ಎಂದು ವಿವರಿಸಿದರು.
‘ಕೇರಳದಲ್ಲಿ ಕ್ವಾರಿಯಲ್ಲಿ ಶೇ 90ರಷ್ಟು ಇಟ್ಟಿಗೆ ತೆಯೆಗಬಹುದು. ಜಿಲ್ಲೆಯಲ್ಲೀ ಹಿಂದೆ ಅಷ್ಟು ಇಟ್ಟಿಗೆ ಸಿಗುತ್ತಿತ್ತು. ಈಗ ಗರಿಷ್ಠ 65 ರಷ್ಟು ಇಟ್ಟಿಗೆ ಮಾತ್ರ ಸಿಗುತ್ತವೆ. ಈ ವ್ಯರ್ಥವಾಗುವ ಕಲ್ಲಿನ ವೆಚ್ಚವನ್ನೂ ಲೆಕ್ಕಕ್ಕೆ ಪರಿಗಣಿಸಬೇಕು’ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ರವಿ ರೈ, ‘ಪರವಾನಗಿ ಪಡೆದ ಜಾಗದಲ್ಲಿ ಕಲ್ಲು ತೆಗೆಯಲು ಜಂಟಿ ಆರ್‌ಟಿಸಿಯಲ್ಲಿ ಹೆಸರು ಇರುವ ಎಲ್ಲರ ಒಪ್ಪಿಗೆ ಬೇಕಾಗುತ್ತದೆ. ಹಾಗಾಗಿ ಜಿಲ್ಲೆಯಲ್ಲಿ ಅರ್ಜಿ ಹಾಕಿದರೂ ಹೆಚ್ಚು ಪರವಾನಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಗುಣಮಟ್ಟದ ಪ್ರತಿ ಕೆಂಪು ಕಲ್ಲಿಗೆ ಕ್ವಾರಿಯಲ್ಲಿ ₹ 30ರಿಂದ ₹35 ರವರೆಗೆ, ಎರಡನೇ ದರ್ಜೆಯ ಕಲ್ಲಿಗೆ ₹23ರಿಂದ 25ರವರೆಗೆ ದರವಿದೆ. ಸಾಗಾಟ ದೂರ ಹೆಚ್ಚಾದಂತೆ ದರವೂ ಜಾಸ್ತಿಯಾಗುತ್ತದೆ’ ಎಂದರು.
‘ಹಿಂದೆ 240ಗೂ ಹೆಚ್ಚು ಕ್ವಾರಿಗಳಿದ್ದ ಜಿಲ್ಲೆಯಲ್ಲಿ ಈಗ 55 ಕ್ವಾರಿಗಳು ಮಾತ್ರ ಇವೆ. ಆದರ, ಲಾರಿಗಳ ಸಂಖ್ಯೆ ಹಿಂದಿನಷ್ಟೇ ಇವೆ. ಹಿಂದೆ ಪ್ರತಿ ಲಾರಿ ದಿನಕ್ಕೆ ಸರಾಸರಿ ನಾಲ್ಕು ಟ್ರಿಪ್ ಮಾಡುತ್ತಿದ್ದುದು, ಈಗ ಒಂದು ಟ್ರಿಪ್ ಕೂಡಾ ಸಿಗುವುದಿಲ್ಲ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಖಜಾಂಚಿ ರಾಮ ಮೊಗರೋಡಿ ಹಾಗೂ ಬಂಟ್ವಾಳ ತಾಲ್ಲೂಕು ಘಟಕದ ಅಧ್ಯಕ್ಷ ಮೋಹನ ಶೆಟ್ಟಿ ಭಾಗವಹಿಸಿದ್ದರು
‘ಪ್ರತಿ ಇಟ್ಟಿಗೆ ತೆಗೆಯಲು ₹ 28 ವೆಚ್ಚ’
‘ಎಕರೆ ಜಾಗದಲ್ಲಿ ಗರಿಷ್ಠ 16ಸಾವಿರ ಟನ್ ಅಂದರೆ 5.28 ಲಕ್ಷ ಕೆಂಪುಕಲ್ಲು ಇಟ್ಟಿಗೆ ತೆಗೆಯಲು ಮಾತ್ರ ಅವಕಾಶ ಇದೆ. ಒಂದು ಕ್ವಾರಿಯಲ್ಲಿ ದಿನದಲ್ಲಿ ಗರಿಷ್ಠ 2 ಸಾವಿರ ಇಟ್ಟಿಗೆ ತೆಗೆಯಬಹುದು. ಕಾರ್ಮಿಕರಿಗೆ ₹5 ಇಂಧನಕ್ಕೆ ₹ 3 ಜೆಸಿಬಿಗೆ ₹ 2.5 ನಿರ್ವಹಣೆ ₹ 3 ಯಂತ್ರೋಪಕರಣಕ್ಕೆ ₹1 ಕಾರ್ಮಿಕರಿಗೆ ₹ ಕಚೇರಿ ನಿರ್ವಹಣೆಗೆ ₹ 1 ರಾಯಧನ ಪಾವತಿಗೆ ₹ 2.80 ಭೋಗ್ಯಕ್ಕೆ ₹ 4.70 ಯೋಜನೆ ಮುಗಿದ ಬಳಿಕ ಮಣ್ಣುಮುಚ್ಚಿ ಸಮತಟ್ಟುಗೊಳಿಸಲು ₹ 3 ಸೇರಿದಂತೆ ಒಂದು ಇಟ್ಟಿಗೆಗೆ ಏನಿಲ್ಲವೆಂದರೂ ₹ 28 ರೂ ವೆಚ್ಚ ಆಗುತ್ತದೆ’ ಎಂದು ಸಂಘದ ಉಪಾಧ್ಯಕ್ಷ ರವಿಶಂಕರ ಸೇರಿಗಾರ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.