ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಜಿಲ್ಲಾ ಸಮಿತಿ ವತಿಯಿಂದ ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂದಾಜು ₹6 ಕೋಟಿ ವೆಚ್ಚದಲ್ಲಿ ತಲೆಎತ್ತಿರುವ ‘ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಶತಮಾನೋತ್ಸವ ಕಟ್ಟಡ’ದ ಉದ್ಘಾಟನಾ ಸಮಾರಂಭವು ಜು.26ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ.
ರಾಜ್ಯಪಾಲ ಥಾವರಚಂದ್ ಗೆಹಲೋತ್ ನೂತನ ಕಟ್ಟಡ ಉದ್ಘಾಟಿಸುವರು. ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ರೆಡ್‌ಕ್ರಾಸ್ ಸೊಸೈಟಿ ಉಪಾಧ್ಯಕ್ಷ ಭಾಸ್ಕರ ರಾವ್ ಭಾಗವಹಿಸುವರು ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
20 ಸಾವಿರ ಚದರ ಅಡಿಯ ಶತಮಾನೋತ್ಸವ ಕಟ್ಟಡವು ನಾಲ್ಕು ಅಂತಸ್ತು ಹೊಂದಿದೆ. ನೆಲ ಅಂತಸ್ತಿನಲ್ಲಿ ಕಚೇರಿ, ಸಂದರ್ಶಕರ ಕೊಠಡಿ, ಮೀಟಿಂಗ್ ಹಾಲ್, 1ನೇ ಅಂತಸ್ತಿನಲ್ಲಿ 300 ಆಸನಗಳ ‘ಪ್ರೇರಣಾ’ ಹವಾ ನಿಯಂತ್ರಿತ ಸಭಾಂಗಣ, 2ನೇ ಅಂತಸ್ತಿನಲ್ಲಿ 500 ಮಂದಿ ಸಾಮರ್ಥ್ಯದ ‘ಸೀ ವ್ಯು’ಸಭಾಂಗಣವಿದೆ. ಸಾರ್ವಜನಿಕ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು ಮತ್ತು ದಾನಿಗಳ ನೆರವಿನಿಂದ ನೂತನ ಕಟ್ಟಡ ನಿರ್ಮಾಣಗೊಂಡಿದೆ ಎಂದು ಹೇಳಿದರು.
ರಕ್ತ ಅಗತ್ಯವುಳ್ಳವರಿಗೆ ದಾನಿಗಳ ಸಂಪರ್ಕ ಸೇತುವಾಗಿ ಕೆಲಸ ಮಾಡುವ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಇದೇ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಗುವುದು. ಲೇಡಿಗೋಶನ್ ಆಸ್ಪತ್ರೆಯ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೆಡ್‌ಕ್ರಾಸ್‌ನ ರಕ್ತನಿಧಿ ಕೇಂದ್ರವು ಲೇಡಿಗೋಶನ್ ಆಸ್ಪತ್ರೆಯಲ್ಲಿ ದಾಖಲಾಗುವ ಗರ್ಭಿಣಿಯರು, ಬಾಣಂತಿಯರು ಸಹಿತ ಅವಶ್ಯ ಇರುವ ರೋಗಿಗಳಿಗೆ ಉಚಿತವಾಗಿ ಸುಮಾರು 500 ಯುನಿಟ್ ರಕ್ತ ನೀಡುತ್ತಿದೆ ಎಂದು ಹೇಳಿದರು.
ಉಪಾಧ್ಯಕ್ಷ ಸತೀಶ್ ರಾವ್, ಖಜಾಂಚಿ ಮೋಹನ್ ಶೆಟ್ಟಿ, ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ಪ್ರಮುಖರಾದ ಪುಷ್ಪರಾಜ್ ಜೈನ್, ಯತೀಶ್ ಬೈಕಂಪಾಡಿ, ಸಚ್ಚಿದಾನಂದ ರೈ, ಸುಮನಾ ಬೋಳಾರ್, ಗುರುದತ್ ನಾಯಕ್, ಎ.ವಿಠಲ, ಪಿ.ಬಿ.ಹರೀಶ್ ರೈ ಇದ್ದರು.
ಇಲ್ಲಿನ ಯಾವುದೇ ಆಸ್ಪತ್ರೆಯಲ್ಲಿ ದಾಖಲಾಗುವ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಉಚಿತವಾಗಿ ರಕ್ತ ನೀಡುವ ಯೋಜನೆಯನ್ನು ಭವಿಷ್ಯದಲ್ಲಿ ಅನುಷ್ಠಾನಗೊಳಿಸಲಾಗುವುದು.ಶಾಂತಾರಾಮ ಶೆಟ್ಟಿ ರೆಡ್‌ಕ್ರಾಸ್ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.