ADVERTISEMENT

ಕುಡುಬಿ: ಪರಿಶಿಷ್ಟ ಜಾತಿಯಾಗಿ ಪರಿಗಣಿಸಲು ಒತ್ತಾಯ

1956ರವರೆಗೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದ ಕುಡುಬಿಯರು

​ಪ್ರಜಾವಾಣಿ ವಾರ್ತೆ
Published 8 ಮೇ 2025, 7:11 IST
Last Updated 8 ಮೇ 2025, 7:11 IST

ಮಂಗಳೂರು: ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಕುಡುಬಿ ಜಾತಿಯನ್ನು ‘ಪರಿಶಿಷ್ಟ ಜಾತಿ’ ಎಂಬುದಾಗಿ ಪರಿಗಣಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದವರು ಒತ್ತಾಯಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಸಂಘದ ಅಧ್ಯಕ್ಷ ಕೃಷ್ಣ ಕೊಂಪದವು, ‘ಕುಡುಬಿ ಜಾತಿಯನ್ನು 1936 ವರೆಗೆ ಮದರಾಸು ಪ್ರಾಂತ್ಯದ ದಕ್ಷಿಣ ಕನ್ನಡ (ಸೌತ್ ಕೆನರಾ) ಜಿಲ್ಲೆಯಲ್ಲಿ ಡಿಪ್ರೆಸ್ಸ್‌ಡ್ ಕ್ಲಾಸ್ ಪ್ರಿಮಿಟಿವ್ ಟ್ರೈಬ್‌ (ಈಗಿನ ಪರಿಶಿಷ್ಟ ಜಾತಿ) ಎಂದು ಪರಿಗಣಿಸಲಾಗಿತ್ತು. ಸಂವಿಧಾನದ ಅನುಚ್ಛೇದ 341 (1)ರ ಪ್ರಕಾರ 1950ರಲ್ಲಿ ಜಾರಿಯಾದ 'ದಿ ಕಾನ್ಸ್ಟಿಟ್ಯೂಷನ್ (ಶೆಡ್ಯೂಲ್ಡ್ ಕಾಸ್ಟ್) ಆದೇಶದಲ್ಲೂ ಮದ್ರಾಸ್ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಡುಬಿ ಜಾತಿಯನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಿ ಈ ಸಮುದಾಯಕ್ಕೆ ಸಂವಿಧಾನ ಬದ್ದ ಹಕ್ಕನ್ನೂ ನೀಡಲಾಗಿತ್ತು. ನಂತರ ಕಣ್ತಪ್ಪಿನಿಂದಾಗಿ ಕುಡುಬಿ ಜಾತಿ ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಹೊರಗೆ ಉಳಿದಿದ್ದು, ಇದರಿಂದ ಕುಡುಬಿಯರಿಗೆ ಅನ್ಯಾಯವಾಗಿದೆ’ ಎಂದು ಅವರು ಹೇಳಿದರು.

‘1953ರಲ್ಲಿ ರಚಿಸಲಾದ ಕಾಕಾ ಸಾಹೇಬ ಕಾಲೇಲ್ಕರ್ ಆಯೋಗದ ವರದಿ ಪ್ರಕಾರ 1956ರಲ್ಲಿ ಮಾಡಲಾಗಿದ್ದ ಪರಿಶಿಷ್ಟ ವರ್ಗಗಳು ಮತ್ತು ಪರಿಶಿಷ್ಟ ಪಂಗಡಗಳ (ತಿದ್ದುಪಡಿ) ಆದೇಶದಲ್ಲೂ  ಕುಡುಬಿಯವರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲಾಗಿತ್ತು. ಆದರೆ ಈ ತಿದ್ದುಪಡಿ ಆದೇಶ ಪ್ರಕಟವಾಗುವಾಗ ಕುಡುಬಿ ಜಾತಿಯ ಹೆಸರು ಕೈಬಿಟ್ಟು ಹೋಗಿತ್ತು. ಯಾವುದೇ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕಾದರೆ ಸರ್ಕಾರ ವರದಿ ಸಲ್ಲಿಸಬೇಕು. ಮದ್ರಾಸ್ ಸರ್ಕಾರದಿಂದ ಅಂತಹ ಯಾವುದೇ ವರದಿ ರಾಷ್ಟ್ರಪತಿಗಳಿಗಾಗಲೀ ಕೇಂದ್ರ ಸರ್ಕಾರಕ್ಕಾಗಲೀ ಸಲ್ಲಿಕೆಯಾಗಿಲ್ಲ. ಈ ಬಗ್ಗೆ ತಮಿಳುನಾಡು ಸರ್ಕಾರ ಹಿಂಬರಹ ನೀಡಿದೆ’ ಎಂದರು.

ADVERTISEMENT

‘1901ರಿಂದ 1951ರವರೆಗಿನ ಜನಗಣತಿ ವರದಿಯಲ್ಲಿ ಸೌತ್‌ ಕೆನರಾ ಜಿಲ್ಲೆಯ ಕುಡುಬಿ ಬದಲು ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿರುವ ಕುಡುಂಬಣ್ ಸಮುದಾಯದ ಹೆಸರು ಸೇರಿಸಲಾಗಿದೆ. ರಾಜ್ಯದ ಯಾವುದೇ ಪ್ರದೇಶದಲ್ಲಿ ಕುಡುಂಬಣ್ ಸಮುದಾಯ ಇಲ್ಲ. ಇದೀಗ ರಾಜ್ಯದಲ್ಲಿ ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಯುತ್ತಿದ್ದು, ಅದರ ಜಾತಿಗಳ ಪಟ್ಟಿಯಲ್ಲಿ ರಾಜ್ಯದಲ್ಲಿ ಇಲ್ಲದ ‘ಕುಡುಂಬಣ್’ ಜಾತಿಯ ಹೆಸರು ಇದೆ. ಇದು ‘ಕುಡುಬಿ’ ಜಾತಿಯ ಬದಲಾಗಿ ತಪ್ಪಾಗಿ ಸೇರಿಸಲಾದ ಹೆಸರು.  ಈ ಲೋಪವನ್ನು ಸರಿಪಡಿಸಲು ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘1950ರಲ್ಲಿ ರಾಷ್ಟ್ರಪತಿ ಹೊರಡಿಸಿದ ಪಟ್ಟಿಯಲ್ಲಿನ ಯಾವುದೇ ಜಾತಿಯನ್ನು ಅಥವಾ ಉಪಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ತೆಗೆಯುವಂತಿಲ್ಲ ಅಥವಾ ಬದಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.  ನ್ಯಾ.ನಾಗಮೋಹನ ದಾಸ್ ಆಯೋಗವು ಈ ತೀರ್ಪನ್ನು ಆಧರಿಸಿ ಕುಡುಬಿ ಜಾತಿಯನ್ನು ಸಮೀಕ್ಷೆಗೆ ಪರಿಗಣಿಸಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಅವರು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶೇಖರ ಗೌಡ, ಉಪಾಧ್ಯಕ್ಷ ಕೊರ್ಗ್ಯ ಗೌಡ, ವಿದ್ಯಾವೇದಿಕೆಯ ಸಂಚಾಲಕ ಉದಯ ಮಂಗಳೂರು, ಮುಖಂಡ ಕೆ.ಆರ್.ಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.