ADVERTISEMENT

ಕಂಬಳ ಕ್ರೀಡೆಗೆ ವಾರ್ಷಿಕ ₹ 2 ಕೋಟಿ ಮೀಸಲಿಡಿ

ರಾಜ್ಯ ಕಂಬಳ ಅಸೋಸಿಯೇಷ್ನ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 4:58 IST
Last Updated 12 ಅಕ್ಟೋಬರ್ 2025, 4:58 IST
ಸುದ್ದಿಗೋಷ್ಠಿಯಲ್ಲಿ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಮಾತನಾಡಿದರು. ಲೋಕೇಶ್‌ ಶೆಟ್ಟಿ ಮುಚ್ಚೂರು ಹಾಗೂ ವಿಜಯ್ ಕುಮಾರ್ ಕಂಗಿನಮನೆ ಭಾಗವಹಿಸಿದ್ದರು 
ಸುದ್ದಿಗೋಷ್ಠಿಯಲ್ಲಿ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಮಾತನಾಡಿದರು. ಲೋಕೇಶ್‌ ಶೆಟ್ಟಿ ಮುಚ್ಚೂರು ಹಾಗೂ ವಿಜಯ್ ಕುಮಾರ್ ಕಂಗಿನಮನೆ ಭಾಗವಹಿಸಿದ್ದರು    

ಮಂಗಳೂರು: ಕಂಬಳ ಕ್ರೀಡೆಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲೇ ಕನಿಷ್ಠ ₹ 2 ಕೋಟಿ ಅನುದಾನ ಮೀಸಲಿಡಬೇಕು ಎಂದು ರಾಜ್ಯ ಕಂಬಳ ಅಸೋಸಿಯೇಷನ್‌ ಒತ್ತಾಯಿಸಿದೆ.

ಈ ಕುರಿತು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ‘ಪ್ರತಿ ಕಂಬಳಕ್ಕೆ ಸರ್ಕಾರ ಈ ಹಿಂದೆ  ₹5 ಲಕ್ಷ ಅನುದಾನ ನೀಡುತ್ತಿತ್ತು. ಕಳೆದ ಸಾಲಿನಲ್ಲಿ ಪ್ರತಿ ಕಂಬಳಕ್ಕೆ ₹2 ಲಕ್ಷ ಅನುದಾನ ನೀಡಿತ್ತು. ಸರ್ಕಾರ ಕಂಬಳಕ್ಕೆ ವಾರ್ಷಿಕ ₹ 2 ಕೋಟಿ ಅನುದಾನ ಒದಗಿಸಿದರೆ, ಅಸೋಸಿಯೇಷನ್‌ ಮಾನ್ಯತೆಯೊಂದಿಗೆ ನಡೆಸುವ ಪ್ರತಿ ಕಂಬಳ ಆಯೋಜಕರಿಗೂ ₹ 8 ಲಕ್ಷ ಅನುದಾನ ಹಂಚಬಹುದು. ಅನುದಾನ ನೀಡುವ ಕುರಿತು ವಿಶೇಷ ಅನುದಾನ ಸಂಹಿತೆಯನ್ನೂ ರೂಪಿಸಲಾಗುತ್ತಿದೆ’ ಎಂದರು.

‘ಪ್ರತಿ ಕಂಬಳದಲ್ಲಿ ಬಹುಮಾನ ನೀಡಲು 18 ಪವನ್ (144 ಗ್ರಾಂ) ಚಿನ್ನ ಬೇಕಾಗುತ್ತದೆ. ಕಂಬಳ ಸಂಘಟಿಸಲು ₹ 25 ಲಕ್ಷದಿಂದ ₹ 40 ಲಕ್ಷದವರೆಗೆ ಖರ್ಚಾಗುತ್ತದೆ. ಕೆಲವು ಉದ್ಯಮಿಗಳು, ಕೈಗಾರಿಕೆಗಳ ನೆರವು ಪಡೆದು ಐಪಿಎಲ್‌ ಮಾದರಿಯಲ್ಲಿ ಪ್ರಾಯೋಜಕತ್ವ ನೀಡುವ ಚಿಂತನೆ ಇದೆ’ ಎಂದರು. 

ADVERTISEMENT

‘ಕೋಣ ಸಾಕುವವರಿಗೆ ಹಾಗೂ ಕಂಬಳ ಓಟಗಾರರಿಗೆ ಭವಿಷ್ಯನಿಧಿ, ವಿಮೆ ಭದ್ರತೆ  ಮೊದಲಾದ ಸವಲತ್ತುಗಳು ಸಿಗಬೇಕು. ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಅವರಿಗೆ ಮನವಿ ಸಲ್ಲಿಸಿದ್ದೇವೆ’ ಎಂದರು. 

‘ಕಂಬಳ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದೆ. ರಾಷ್ಟ್ರೀಯ ಪ್ರಾಧಿಕಾರದ ಮಾನ್ಯತೆ ಸಿಗಲು ಸಮಯ ತಗಲುತ್ತದೆ. ಕರ್ನಾಟಕದ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಪ್ರಾಧಿಕಾರದ ಮಾನ್ಯತೆ ಪಡೆದಿರಬೇಕೆಂಬ ನಿಯಮದಿಂದ ವಿನಾಯಿತಿ ನೀಡಿ ಕಂಬಳಕ್ಕೆ ರಾಜ್ಯ ಪ್ರಾಧಿಕಾರದ ಮಾನ್ಯತೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಈ ಭಾಗದ ಶಾಸಕರು ಸಹಕರಿಸಿದ್ದಾರೆ’ ಎಂದರು.

‘ಕಂಬಳಕ್ಕೆ ಪ್ರತ್ಯೇಕ ಲಾಂಛನವನ್ನು ರೂಪಿಸಲಿದ್ದೇವೆ. ಅದರ ಜೊತೆಗೆ ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಲಾಂಛನವನ್ನೂ ಅಳವಡಿಸಿಕೊಳ್ಳಲಿದ್ದೇವೆ’ ಎಂದರು. 

ಸುದ್ದಿಗೋಷ್ಠಿಯಲ್ಲಿ ಅಸೋಷಿಸಿಯೇಷನ್‌ ಕಾರ್ಯದರ್ಶಿ ವಿಜಯ್ ಕುಮಾರ್ ಕಂಗಿನಮನೆ  ಹಾಗೂ ಖಜಾಂಚಿ ಲೋಕೇಶ್‌ ಶೆಟ್ಟಿ ಮುಚ್ಚೂರು ಭಾಗವಹಿಸಿದ್ದರು. 

ಮುಂದಿನ ವರ್ಷದಿಂದ ದಸರಾದಲ್ಲಿ ಕಂಬಳ?

‘ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಕಂಬಳ ಏರ್ಪಡಿಸುವಂತೆ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದರು.  ಮುಂದಿನ ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಕಂಬಳ ಏರ್ಪಡಿಸುವ ಚಿಂತನೆ ಇದೆ’ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.  ‘ಬೆಂಗಳೂರಿನಲ್ಲಿ ಕಂಬಳ ಆಯೋಜಿಸುವ ಬಗ್ಗೆ ಈ ವರ್ಷ ಕೋರಿಕೆ ಬಂದಿಲ್ಲ.  ಈ ವರ್ಷ 25 ಕಂಬಳ ನಡೆಯಲಿವೆ. ಹರೇಕಳ ಹಾಗೂ ಬಡಗುಬೆಟ್ಟು ಕಂಬಳಗಳು ವೇಳಾಪಟ್ಟಿಗೆ ಹೊಸತಾಗಿ ಸೇರ್ಪಡೆಯಾಗಿವೆ’ ಎಂದರು.   

‘ಹಿಂಸೆ ತಡೆಯಲು ಕಟ್ಟುನಿಟ್ಟಿನ ಕ್ರಮ

’ ‘ಕಂಬಳ ಸಂದರ್ಭದಲ್ಲಿ ಕೋಣಗಳಿಗೆ ಹಿಂಸೆ ನೀಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸುತ್ತೇವೆ. ನಮ್ಮ ಅಸೋಸಿಯೇಷನ್ ಜೊತೆಗೆ ಪೊಲೀಸ್‌ ಇಲಾಖೆ ಪಶುಸಂಗೋಪನಾ ಇಲಾಖೆಗಳೂ ಈ ಬಗ್ಗೆ ಕಣ್ಗಾವಲು ಇಡಲಿವೆ. ಇದನ್ನೂ ಮೀರಿಯೂ ಕೋಣಗಳಿಗೆ ಹಿಂಸೆ ನೀಡಿದ್ದು ಕಂಡು ಬಂದರೆ ಅಂತಹ ಕಂಬಳಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಲಿದ್ದೇವೆ. ಕಂಬಳ ಆಯೋಜಿಸುವವರು ಪಾಲಿಸ ಬೇಕಾದ ನಿಯಮಗಳ ಕುರಿತು ಪುಸ್ತಕವನ್ನೇ ಸಿದ್ಧಪಡಿಸಲಿದ್ದೇವೆ’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.