ADVERTISEMENT

‘ಜವಾಬ್ದಾರಿಯುತ ಪತ್ರಿಕೋದ್ಯಮ ಇಂದಿನ ಅಗತ್ಯ’-ಋಷಿಕೇಶ್ ಸೋನಾವಣೆ

ಪತ್ರಿಕಾ ದಿನಾಚರಣೆ, ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 6:40 IST
Last Updated 23 ಜುಲೈ 2021, 6:40 IST
ಮಂಗಳೂರಿನಲ್ಲಿ ಗುರುವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಎಸ್ಪಿ ಋಷಿಕೇಶ್ ಸೋನಾವಣೆ ಅವರು ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿಯನ್ನು ಸಂದೀಪ ವಾಗ್ಲೆ ಅವರಿಗೆ ಪ್ರದಾನ ಮಾಡಿದರು.
ಮಂಗಳೂರಿನಲ್ಲಿ ಗುರುವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಎಸ್ಪಿ ಋಷಿಕೇಶ್ ಸೋನಾವಣೆ ಅವರು ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿಯನ್ನು ಸಂದೀಪ ವಾಗ್ಲೆ ಅವರಿಗೆ ಪ್ರದಾನ ಮಾಡಿದರು.   

ಮಂಗಳೂರು: ಸಾಮಾಜಿಕ ಮಾಧ್ಯಮಗಳ ಭರಾಟೆಯ ನಡುವೆ ಜವಾಬ್ದಾರಿಯುತ ಪತ್ರಿಕೋದ್ಯಮ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಅಭಿಪ್ರಾಯಪಟ್ಟರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕವು ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್‌ನ ಸಹಕಾರದಲ್ಲಿ ಗುರುವಾರ ಇಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿರುವ ಪತ್ರಕರ್ತರು ಸಮಾಜದಲ್ಲಿ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಿದಾಗ ಅದಕ್ಕೆ ಪೂರಕವಾಗಿ ಇಲಾಖೆಯಿಂದಲೂ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.

ಪತ್ರಕರ್ತ ಡಾ. ಸಂದೀಪ ವಾಗ್ಲೆ ಅವರಿಗೆ ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿ ಪ್ರದಾನ ಮಾಡಲಾಯಿತು. ‘ನಾಳೆಯ ಪತ್ರಕರ್ತರು’ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಜೋಗಿ (ಗಿರೀಶ್ ರಾವ್ ಹತ್ವಾರ್), ‘ಪತ್ರಿಕೋದ್ಯಮದಲ್ಲಿ ಮುಂದಿನ 10 ವರ್ಷಗಳಲ್ಲಿ ಆಗಬಹುದಾದ ಸ್ಥಿತ್ಯಂತರವು ಕೋವಿಡ್‌ನಿಂದಾಗಿ ಎರಡು ವರ್ಷಗಳಲ್ಲೇ ಆಗಿರುವುದು ದುರಂತ. ಈ ಅವಧಿಯಲ್ಲಿ ಅನೇಕ ಪತ್ರಕರ್ತರು ಕೆಲಸ ಕಳೆದುಕೊಂಡರೆ, ಕೆಲ ಪತ್ರಿಕೆಗಳು ಮುದ್ರಣವನ್ನು ಸ್ಥಗಿತಗೊಳಿಸಿ, ಆನ್‌ಲೈನ್‌ ಆವೃತ್ತಿಗೆ ಪರಿವರ್ತನೆಗೊಂಡಿವೆ’ ಎಂದರು.

ADVERTISEMENT

ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಬಿ. ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.