ADVERTISEMENT

ತಡೆಗೋಡೆ ಕುಸಿತ: ನಿಡ್ಪಳ್ಳಿ–ಈಶ್ವರಮಂಗಲ ರಸ್ತೆಗೆ ಅಪಾಯಕಾರಿ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:33 IST
Last Updated 18 ಜುಲೈ 2025, 6:33 IST
ಪುತ್ತೂರು ತಾಲ್ಲೂಕಿನ ಈಶ್ವರಮಂಗಲದಿಂದ ನಿಡ್ಪಳ್ಳಿ ಗ್ರಾಮದ ಬೊಳುಂಗುಡೆ ಎಂಬಲ್ಲಿ ರಸ್ತೆ ಬದಿಯ ತಡೆಗೊಡೆ ಬುಧವಾರ ರಾತ್ರಿ ಕುಸಿದು ಬಿದ್ದಿದೆ
ಪುತ್ತೂರು ತಾಲ್ಲೂಕಿನ ಈಶ್ವರಮಂಗಲದಿಂದ ನಿಡ್ಪಳ್ಳಿ ಗ್ರಾಮದ ಬೊಳುಂಗುಡೆ ಎಂಬಲ್ಲಿ ರಸ್ತೆ ಬದಿಯ ತಡೆಗೊಡೆ ಬುಧವಾರ ರಾತ್ರಿ ಕುಸಿದು ಬಿದ್ದಿದೆ   

ಪುತ್ತೂರು: ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈಶ್ವರಮಂಗಲದಿಂದ ನಿಡ್ಪಳ್ಳಿ ಗ್ರಾಮದ ಶಾಂತದುರ್ಗಾ ದೇವಸ್ಥಾನದ ಬಳಿಗೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖೆಯ ರಸ್ತೆಯಲ್ಲಿ ಬೊಳುಂಗುಡೆ ಎಂಬಲ್ಲಿ ರಸ್ತೆಯ ಬದಿಯ ತಡೆಗೊಡೆ ಬುಧವಾರ ರಾತ್ರಿ ಕುಸಿದಿದೆ.

ಬೊಳುಂಗಡೆ ನಿವಾಸಿ ಸೀತಾ ಗೋವಿಂದ ಮಣಿಯಾಣಿ ಎಂಬುವರು ಮನೆಯ ಹಿಂಬದಿಯಲ್ಲಿ ರಸ್ತೆ ಬದಿಗೆ ನಿರ್ಮಿಸಿದ್ದ ತಡೆಗೋಡೆ ಕುಸಿದು ರಸ್ತೆ ಅಪಾಯಕಾರಿ ಸ್ಥಿತಿಗೆ ತಲುಪಿದೆ. ರಸ್ತೆಯ ತಿರುವು ಭಾಗದಲ್ಲೇ ತಡೆಗೋಡೆ ಕುಸಿದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ.

ಬಹುಗ್ರಾಮ ಕುಡಿಯುವ ನೀರಿನ ಪೈಪ್ ಲೈನನ್ನು ರಸ್ತೆ ತಡೆಗೋಡೆಯ ಬದಿಯಲ್ಲೇ ಅಳವಡಿಸಲಾಗಿದ್ದು, ಮಳೆನೀರು ಪೈಪ್‌ಲೈನ್ ಅಳವಡಿಸಿರುವ ಭಾಗದಲ್ಲೇ ಹರಿದಿರುವುದರಿಂದ ತಡೆಗೋಡೆ ಕುಸಿದಿದೆ ಎಂಬ ಆರೋಪ ವ್ಯಕ್ತವಾಗಿದೆ.

ADVERTISEMENT

ಈ ರಸ್ತೆಯಲ್ಲಿ ಶಾಲಾ ವಾಹನಗಳು ಸೇರಿದಂತೆ ದಿನನಿತ್ಯ ನೂರಾರು ವಾಹನಗಳು ಓಡಾಡುತ್ತಿದ್ದು, ತಡೆಗೋಡೆ ಭಾಗ ಇನ್ನಷ್ಟು ಕುಸಿದರೆ ವಾಹನ ಸಂಚಾರಕ್ಕೆ ತೊಂದರೆ ಆಗುವ ಆತಂಕ ಎದುರಾಗಿದೆ. ಲೋಕೋಪಯೋಗಿ ಇಲಾಖೆಯವರು ತಕ್ಷಣ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಿಡ್ಪಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಧ್ಯಾಲಕ್ಷ್ಮಿ, ಸಿಬ್ಬಂದಿ ಜಯಕುಮಾರಿ, ಗ್ರಾಮ ಆಡಳಿತಾಧಿಕಾರಿ ಕಚೇರಿಯ ಸಹಾಯಕಿ ಜಯಶ್ರೀ ಪರಿಶೀಲನೆ ನಡೆಸಿದ್ದಾರೆ.

ಮರ, ವಿದ್ಯುತ್ ಕಂಬ ಧರೆಗೆ: ದೈವಸ್ಥಾನಕ್ಕೆ ಹಾನಿ

ಪುತ್ತೂರು: ಪುತ್ತೂರು-ಪಾಣಾಜೆ-ಸ್ವರ್ಗ ರಸ್ತೆಯ ಮೇಲ್ಭಾಗದ ಗುಡ್ಡದ 6 ಮರ, ವಿದ್ಯುತ್ ಕಂಬ ಸಮೇತ ಕುಸಿದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.

ತಾಲ್ಲೂಕಿನ ಪಾಣಾಜೆ ಗ್ರಾಮದ ಆರ್ಲಪದವು ಸಮೀಪದ ಉಡ್ಡಂಗಳ-ಉದಯಗಿರಿ ಎಂಬಲ್ಲಿ ಗುರುವಾರ ನಸುಕಿನ ವೇಳೆ ಅವಘಡ ನಡೆದಿದ್ದು, ದೈವಸ್ಥಾನಕ್ಕೂ ಹಾನಿಯಾಗಿದೆ.

ಗುಡ್ಡದ ಮಣ್ಣು ಕುಸಿಯುವ ವೇಳೆ ಆ ಭಾಗದಲ್ಲಿದ್ದ 6 ಬೃಹತ್ ಮರಗಳು ರಸ್ತೆಗೆ ಉರುಳಿವೆ. ಮರಗಳು ಉರುಳಿ ರಸ್ತೆ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಆ ಭಾಗದ 6 ವಿದ್ಯುತ್ ಕಂಬಗಳೂ ಮುರಿದು ಬಿದ್ದಿವೆ. ಇದರಿಂದಾಗಿ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು.

ಉರುಳಿಬಿದ್ದ ಮರಗಳ ಪೈಕಿ ಮರವೊಂದು ಅಲ್ಲಿನ ಧೂಮಾವತಿ ದೈವಸ್ಥಾನದ ಮೇಲೆ ಬಿದ್ದಿದ್ದು, ದೈವಸ್ಥಾನದ ಚಾವಣಿಗೆ ಹಾನಿಯಾಗಿದೆ. ವಾಹನ ಮತ್ತು ಜನ ಸಂಚಾರವಿಲ್ಲದ ವೇಳೆ ಈ ಘಟನೆ ನಡೆದಿದೆ.

ಪಾಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೈಮುನಾತ್‌ಉಲ್ ಮೆಹರಾ, ಪಿಡಿಒ ಆಶಾ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಕಾನಿಷ್ಕ, ಪಾಣಾಜೆ ಉಪವಲಯ ಅರಣ್ಯಾಧಿಕಾರಿ ಮದನ್, ಅರಣ್ಯ ಇಲಾಖೆಯ ಬೆಟ್ಟಂಪಾಡಿ ಅರಣ್ಯ ರಕ್ಷಕಿ ಪ್ರಜ್ಞಾ, ಬೆಟ್ಟಂಪಾಡಿ ಮೆಸ್ಕಾಂ ಜೂನಿಯರ್ ಎಂಜಿನಿಯರ್ ಪುತ್ತು ಜೆ., ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪಾಣಾಜೆ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಇಲಾಖೆಯ ಅಧಿಕಾರಿಗಳು ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ಉದಯಗಿರಿಯ ಖಾಸಗಿ ಬಡಾವಣೆ ರಸ್ತೆಯ ಮೂಲಕ ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಯಿತು. ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬ ಮತ್ತು ತಂತಿಗಳ ಮರುಜೋಡಣೆ ನಡೆಯುತ್ತಿದೆ.

ಪುತ್ತೂರು ತಾಲ್ಲೂಕಿನ ಪಾಣಾಜೆ ಗ್ರಾಮದ ಆರ್ಲಪದವು ಸಮೀಪದ ಉಡ್ಡಂಗಳ-ಉದಯಗಿರಿ ಎಂಬಲ್ಲಿ ರಸ್ತೆ ಮೇಲ್ಭಾಗದ ಗುಡ್ಡ ಕುಸಿದು ಮರಗಳು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.