ADVERTISEMENT

ಮನೆ ಹಾನಿಗೆ ₹ 5 ಲಕ್ಷ ಪರಿಹಾರ: ಅಶೋಕ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 19:38 IST
Last Updated 7 ಜುಲೈ 2022, 19:38 IST
ಆರ್. ಅಶೋಕ
ಆರ್. ಅಶೋಕ   

ಮಂಗಳೂರು: ‘ಮಳೆಯಿಂದ ಪೂರ್ತಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ₹ 5 ಲಕ್ಷ ಪರಿಹಾರ ನೀಡಲಾಗುವುದು. ಈ ಸಂಬಂಧ ಗುರುವಾರ ಮುಖ್ಯಮಂತ್ರಿ ಜತೆ ಚರ್ಚಿಸಲಾಗಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ಉಳ್ಳಾಲ ತಾಲ್ಲೂಕಿನ ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಂಗಳೂರಿಗೆ ಹೋದ ಕೂಡಲೇ ಶೇ 50ರಷ್ಟು ಪರಿಹಾರ ಮೊತ್ತ ಬಿಡುಗಡೆಗೆ ಆದೇಶ ನೀಡುತ್ತೇನೆ. ಕಡಿಮೆ ಪ್ರಮಾಣದ ಹಾನಿ ಆಗಿರುವವರಿಗೆ ಹಾನಿಯ ಪ್ರಮಾಣದ ಆಧಾರದಲ್ಲಿ ₹50 ಸಾವಿರ ಹಾಗೂ ₹10 ಸಾವಿರ ನೀಡಲು ಅವಕಾಶವಿದೆ. ಈ ಮೊತ್ತವನ್ನು ಒಂದೇ ಕಂತಿನಲ್ಲಿ ಕೊಡಲಾಗುವುದು. ಮನೆಗೆ ನೀರು ನುಗ್ಗಿ ಹಾನಿಯಾದರೆ ₹ 10 ಸಾವಿರ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದ್ದು, ಮನೆ, ಕೃಷಿ, ಜಾನುವಾರು ಹಾನಿಯಾದರೆ ವಿಳಂಬ ಇಲ್ಲದೆ ಪರಿಹಾರ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ಕಡಲ್ಕೊರೆತ ತಡೆಗೆ ತಜ್ಞರ ತಂಡ ನೇಮಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು.

ADVERTISEMENT

ಬಂಟ್ವಾಳ ತಾಲ್ಲೂಕು ಪಂಜಿಕಲ್ಲಿನಲ್ಲಿ ಭೂ ಕುಸಿತದಿಂದ ಮೃತಪಟ್ಟಿರುವ ಮೂವರು ಕಾರ್ಮಿಕರ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗುವುದು. ಕೇರಳದಿಂದ ಬಂದಿರುವ ಈ ಕಾರ್ಮಿಕರ ಮೃತದೇಹವನ್ನು ಅವರ ತವರಿಗೆ ಕಳುಹಿಸಲು ಮುತುವರ್ಜಿ ವಹಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.