ಮಂಗಳೂರು: ಕರ್ನಾಟಕ ಜಲಸಾರಿಗೆ ಮಂಡಳಿಯು ಸಾಗರಮಾಲಾ ಯೋಜನೆಯಡಿ ಹೊಯ್ಗೆಬಜಾರದಿಂದ ಕೂಳೂರು ನಡುವಿನ ಜಲಮಾರ್ಗದಲ್ಲಿ ರೊರೊ ಹಡಗುಗಳ ಸಂಚಾರಕ್ಕೆ ಯೋಜನೆ ರೂಪಿಸಿದ್ದು, ಈ ಕುರಿತ ಸಾರ್ವಜನಿಕ ಪರಿಸರ ಆಲಿಕೆ ಸಭೆ ನಡೆಯಿತು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅಧ್ಯಕ್ಷತೆಯಲ್ಲಿ ಗುರುವಾರ ಇಲ್ಲಿ ನಡೆದ ಸಭೆಯಲ್ಲಿ ಪರಿಸರಾಸಕ್ತರು, ಸ್ಥಳೀಯ ಮೀನುಗಾರರು, ಬಹುಪಾಲು ಜನರು ಪ್ರಸ್ತಾವಿತ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಎನ್‍ಇಸಿಎಫ್ ಸಂಘಟನೆಯ ಶಶಿಧರ ಶೆಟ್ಟಿ ಮಾತನಾಡಿ, ‘ಅಭಿವೃದ್ಧಿ ಹೆಸರಿನಲ್ಲಿ ಈಗಾಗಲೇ ನದಿ ಒತ್ತುವರಿ ಆಗಿದೆ. ಪರಿಸರಕ್ಕೆ ಹಾನಿ ಮಾಡುವ ಯೋಜನೆ ಅನುಷ್ಠಾನಗೊಳಿಸಿ ಜನರ ಹಣ ಪೋಲು ಮಾಡುವುದಕ್ಕಿಂತ ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಬೇಕು’ ಎಂದರು.
ಮಂಗಳೂರು ಟ್ರಾಲ್ ಬೋಟ್ ಯೂನಿಯನ್ ಅಧ್ಯಕ್ಷ ಚೇತನ್ ಬೆಂಗ್ರೆ ಮಾತನಾಡಿ, ‘ಪ್ರಸ್ತಾಪಿತ 3 ಮೀಟರ್ ಆಳದ ಡ್ರೆಜ್ಜಿಂಗ್, ಈ ಯೋಜನೆಗೆ ಪೂರಕವಾಗಲಿದೆಯೇ? ಮಂಗಳೂರು ದಕ್ಕೆಯಲ್ಲಿ ಬೋಟ್ ನಿಲುಗಡೆಗೆ ಜಾಗದ ಕೊರತೆ ಇದ್ದು, 100 ಮೀನುಗಾರಿಕಾ ಬೋಟ್ ನಿಲ್ಲಿಸುವ ಜಾಗದಲ್ಲಿ 1,300 ಬೋಟ್‌ಗಳನ್ನು ನಿಲ್ಲಿಸುವ ಪರಿಸ್ಥಿತಿ ಇದೆ. ಜೆಟ್ಟಿ ನಿರ್ಮಾಣಕ್ಕೆ ಸರಿಯಾದ ವ್ಯವಸ್ಥೆ ಮಾಡಿಕೊಂಡು, ಈ ಯೋಜನೆ ಅನುಷ್ಠಾನಗೊಳಿಸಬೇಕು’ ಎಂದರು.
‘ಬಹುಕಾಲದ ಬೇಡಿಕೆಯಾಗಿರುವ ಮೂರನೇ ಹಂತದ ಜಟ್ಟಿ ವಿಸ್ತರಣೆ ನಡೆಯುತ್ತಿದೆ. ಮುಂದೆ 4 ಮತ್ತು 5ನೇ ಹಂತದ ಜೆಟ್ಟಿ ವಿಸ್ತರಣೆಗೆ ಈ ಯೋಜನೆಯಿಂದ ಅವಕಾಶ ಆಗಲಾರದು. ಫಲ್ಗುಣಿ ನದಿಯಲ್ಲಿ ಡ್ರೆಜ್ಜಿಂಗ್ ಆಗಬೇಕು. ಕೂಲಂಕಷ ಪರಿಶೀಲಿಸಿ ಯೋಜನೆ ಜಾರಿಗೊಳಿಸಬೇಕು’ ಎಂದು ಟ್ರಾಲ್‍ಬೋಟ್ ಯೂನಿಯನ್‍ನ ಉಪಾಧ್ಯಕ್ಷ ಇಬ್ರಾಹಿಂ ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಬಿ.ಕೆ. ಇಮ್ತಿಯಾಜ್, ಯೋಜನೆ ಅನುಷ್ಠಾನಕ್ಕೆ ಆಕ್ಷೇಪ ಇರುವುದಾಗಿ ಹೇಳಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಜನರ ತೆರಿಗೆ ಹಣ ದುರ್ಬಳಕೆಯಾಗಿದೆ. ಇಂತಹ ಯೋಜನೆಗಳಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಯೋಜನೆ ಜಾರಿಗೆ ಮುನ್ನ ಕಲುಷಿತಗೊಂಡಿರುವ ಫಲ್ಗುಣಿ ನದಿ ನೀರನ್ನು ಪರೀಕ್ಷಿಸಬೇಕು ಎಂದರು.
ಅರುಣ್ ಕುಮಾರ್ ಮಾತನಾಡಿ, ‘ಈ ಯೋಜನೆಯು ಶಾಶ್ವತ ವ್ಯವಸ್ಥೆ ಅಲ್ಲ. ವಾಹನ ದಟ್ಟಣೆ ನಿಯಂತ್ರಣದ ಕಾರಣ ನೀಡಿ ಈ ಯೋಜನೆ ಅನುಷ್ಠಾನಗೊಳಿಸುವ ಬದಲಾಗಿ ರಿಂಗ್ ರೋಡ್ ನಿರ್ಮಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು’ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ (ಪ್ರಭಾರಿ) ಕೆ. ಕೀರ್ತಿಕುಮಾರ್, ಪರಿಸರ ಅಧಿಕಾರಿ ಲಕ್ಷ್ಮೀಕಾಂತ ಎಚ್. ಉಪಸ್ಥಿತರಿದ್ದರು.
ಮಂಗಳೂರು ನಗರದಲ್ಲಿ ಯಾವುದೇ ರೀತಿಯ ತೊಂದರೆ ಎದುರಾದಾಗ ಈ ಜಲಮಾರ್ಗವು ಪರ್ಯಾಯ ಸಂಪರ್ಕ ವ್ಯವಸ್ಥೆಯಾಗಲಿದೆ. ಪರಿಸರ ಅಧಿಕಾರಿಗಳು ಸ್ಥಳ ಭೇಟಿ ನೀಡಿಯೇ ಯೋಜನೆ ರೂಪಿಸಿದ್ದಾರೆ.ದರ್ಶನ್ ಎಚ್.ವಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.