ADVERTISEMENT

ಆಸ್ತಿ ತೆರಿಗೆ ಹೆಚ್ಚಳ: ಮಂಗಳೂರು ಪಾಲಿಕೆಯಲ್ಲಿ ಗದ್ದಲ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 8:18 IST
Last Updated 29 ಫೆಬ್ರುವರಿ 2024, 8:18 IST
   

ಮಂಗಳೂರು: ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಗುರುವಾರ ಗದ್ದಲ ಉಂಟಾಯಿತು.

ಆಸ್ತಿ ತೆರಿಗೆ ಹೆಚ್ಚಳಕ್ಕೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಸದಸ್ಯರು, ಕೇಂದ್ರ ಸರ್ಕಾರ ಕಾರಣ ಎಂದು ಕಾಂಗ್ರೆಸ್ ಸದಸ್ಯರು ಸಾಮಾನ್ಯ ಸಭೆಯಲ್ಲಿ ದೂರಿದರು.

ಕಾಂಗ್ರೆಸ್ ಸದಸ್ಯರು ಫಲಕಗಳನ್ನು ಹಿಡಿದುಕೊಂಡು ಮೇಯರ್ ಪೀಠದತ್ತ ನುಗ್ಗಿದಾಗ ಮೇಯರ್ ಎರಡು ಬಾರಿ ಸಭೆಯಿಂದ ಎದ್ದು ಹೋದರು.

ADVERTISEMENT

ನಗರಪಾಲಿಕೆ ಸಾಮಾನ್ಯ ಸಭೆ ಆರಂಭ ಆಗುತ್ತಿದ್ದಂತೆ ಆಡಳಿತ ಪಕ್ಷದ ಸಂಗೀತಾ, ಕಳೆದ ಬಾರಿ ಸಭೆಯಲ್ಲಿ ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿ ತೆಗೆದುಕೊಂಡ ನಿರ್ಣಯದ ಕುರಿತು ಚರ್ಚೆ ಆಗಬೇಕು ಎಂದು ಕೋರಿದರು. ಆಗ ಎದ್ದು ಮುಂದೆ ಬಂದ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮಾಡಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಗಂಟೆ ಬಾರಿಸಿ ಹೊರನಡೆದರು. ಕೆಲಹೊತ್ತು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಬಳಿಕ ಬಿಜೆಪಿ ಸದಸ್ಯರು ಸಭೆಯಿಂದ ಹೊರ ನಡೆದರು. ಪ್ರತಿಪಕ್ಷ ಸದಸ್ಯರು ಸದನದಲ್ಲೇ ಉಳಿದರು. ಸಭೆ ಮುಂದುವರಿಯುವ ಬಗ್ಗೆ ಮಾಹಿತಿ ಇಲ್ಲದೆ ಅಧಿಕಾರಿಗಳೂ ಸದನದಲ್ಲಿ ಉಳಿದರು.

20 ನಿಮಿಷಗಳ ನಂತರ ಸಭೆ ಆರಂಭವಾಯಿತಾದರೂ ಕಾಂಗ್ರೆಸ್ ಸದಸ್ಯರು ಪಟ್ಟು ಬಿಡಲಿಲ್ಲ. ಮೇಯರ್ ಪೀಠದತ್ತ ನುಗ್ಗಿದರು. ಮತ್ತೆ ಗದ್ದಲವಾಯಿತು. ಬಿಜೆಪಿ ಸದಸ್ಯರು ಕೂಡ ಮೇಯರ್ ಪೀಠದ ಬಳಿ ನಿಂತು ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಮೇಯರ್ ಮತ್ತೊಮ್ಮೆ ಎದ್ದು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.