
ಮಂಗಳೂರು: ಸ್ಫೋಟಕ ಅರ್ಧ ಶತಕ ಗಳಿಸಿದ ರಿಷಿ ಶೆಟ್ಟಿ (ಔಟಾಗದೆ 63; 41 ಎಸೆತ, 10 ಬೌಂಡರಿ) ಮತ್ತು ವಿಕೆಟ್ ಕೀಪರ್ ಬ್ಯಾಟರ್ ವಿವಾನ್ ಶೆಟ್ಟಿ ಅವರ ತಾಳ್ಮೆಯ ಬ್ಯಾಟಿಂಗ್ ಮಡಂತ್ಯಾರ್‌ನ ಸೇಕ್ರೆಡ್ ಹಾರ್ಟ್ ಕಾಲೇಜು ತಂಡಕ್ಕೆ ಸುಲಭ ಜಯ ತಂದುಕೊಟ್ಟಿತು.
ನಗರದ ಕೆನರಾ ಕಾಲೇಜು ನೆಹರು ಮೈದಾನದಲ್ಲಿ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳೂರು ವಲಯ ಅಂತರ ಕಾಲೇಜು ಕ್ರಿಕೆಟ್ ಟೂರ್ನಿಯಲ್ಲಿ ಎಸ್‌ಡಿಎಂ ಕಾಲೇಜು ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿದ ಮಡಂತ್ಯಾರ್ ಕಾಲೇಜು ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿತು.
20 ಓವರ್‌ಗಳ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಎಸ್‌ಡಿಎಂ ಕಾಲೇಜು ತಂಡ 17.4 ಓವರ್‌ಗಳಲ್ಲಿ 87 ರನ್‌ಗಳಿಗೆ ಆಲೌಟಾಯಿತು. ಗುರಿ ಬೆನ್ನತ್ತಿದ ಮಡಂತ್ಯಾರು ಕಾಲೇಜು 9.3 ಓವರ್‌ಗಳಲ್ಲಿ ಗೆಲುವಿನ ನಗೆ ಸೂಸಿತು. ಆರಂಭಿಕ ಬೌಲರ್ ಕೂಡ ಆಗಿರುವ ಎಸ್‌ಡಿಎಂ ತಂಡದ ನಾಯಕ ರಿಷಿತ್ ಶೆಟ್ಟಿ ತಾವು ಸೇರಿದಂತೆ ಆರು ಮಂದಿಯ ದಾಳಿ ಸಂಘಟಿಸಿದರೂ ರುಶಿ ಮತ್ತು ವಿವಾನ್ ಜೊತೆಯಾಟ ಮುರಿಯಲು ಸಾಧ್ಯವಾಗಲಿಲ್ಲ.
ಮೊದಲು ಬ್ಯಾಟ್ ಮಾಡಿದ ಎಸ್‌ಡಿಎಂ ತಂಡಕ್ಕೆ ಎಂ.ಎನ್.ವಿಕಾಸ್ ಮತ್ತು ಸ್ವಸ್ತಿಕ್ ಮೂಲ್ಯ ಪೆಟ್ಟು ನೀಡಿದರು. 4 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ತಂಡ 8.5 ಓವರ್‌ಗಳಲ್ಲಿ 31 ರನ್ ಗಳಿಸುವಷ್ಟರಲ್ಲಿ 5 ಬ್ಯಾಟರ್‌ಗಳು ವಾಪಸಾಗಿದ್ದರು. 9ನೇ ಕ್ರಮಾಂಕದ ದೇವಿ ಪ್ರಥಮ್ (ಔಟಾಗದೆ 24; 17 ಎ, 3 ಬೌಂ) ಕೆಚ್ಚೆದೆಯಿಂದ ಆಡಿ ತಂಡದ ಮೊತ್ತ ಏರಿಸಿದರು.
ಸೇಕ್ರೆಡ್ ಹಾರ್ಟ್ ಕಾಲೇಜಿನ ರುಶಿ ಶೆಟ್ಟಿ ಉತ್ತಮ ಬ್ಯಾಟರ್ ಪ್ರಶಸ್ತಿಯೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಎಂ.ಎನ್.ವಿಕಾಸ್ ಉತ್ತಮ ಬೌಲರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸಂಕ್ಷಿಪ್ತ ಸ್ಕೋರು
ಎಸ್‌ಡಿಎಂ ಕಾಲೇಜು: 17.4 ಓವರ್‌ಗಳಲ್ಲಿ 87 (ಸಂಚಿತ್ 15, ದೇವಿ ಪ್ರಥಮ್ ಔಟಾಗದೆ 24, ಪ್ರಜ್ವಲ್ 11; ನಿಶ್ಚಿತ್ 19ಕ್ಕೆ2, ಸ್ವಸ್ತಿಕ್ ಮೂಲ್ಯ 4ಕ್ಕೆ2, ಎಂ.ಎನ್.ವಿಕಾಸ್ 25ಕ್ಕೆ3, ಲೆನ್ಸನ್ ಮೊರಾಸ್ 23ಕ್ಕೆ2, ಸತ್ಯ ಸ್ವರೂಪ್ 9ಕ್ಕೆ1)
ಸೇಕ್ರೆಡ್ ಹಾರ್ಟ್ ಕಾಲೇಜು: 9.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 90 (ರುಶಿ ಶೆಟ್ಟಿ ಔಟಾಗದೆ 63, ವಿವಾನ್ ಶೆಟ್ಟಿ ಔಟಾಗದೆ 17).
ಫಲಿತಾಂಶ: ಸೇಕ್ರೆಡ್ ಹಾರ್ಟ್ ಕಾಲೇಜಿಗೆ 10 ವಿಕೆಟ್ ಜಯ; ಪ್ರಶಸ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.