ADVERTISEMENT

16ನೇ ಪ್ರಕರಣದಲ್ಲೂ ಸೈನೈಡ್‌ ಮೋಹನ್‌ಗೆ ಜೀವಾವಧಿ

ಕಾಸರಗೋಡು ಜಿಲ್ಲೆ ಉಪ್ಪಳ ಸಮೀಪದ ಬೇಕೂರು ಯುವತಿ ಕೊಲೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 15:39 IST
Last Updated 25 ಸೆಪ್ಟೆಂಬರ್ 2019, 15:39 IST

ಮಂಗಳೂರು: ಯುವತಿಯರನ್ನು ಪರಿಚಯಿಸಿಕೊಂಡು ಅತ್ಯಾಚಾರ ನಡೆಸಿ, ಸೈನೈಡ್‌ ನೀಡಿ ಕೊಲೆ ಮಾಡುತ್ತಿದ್ದ ಸರಣಿ ಹಂತಕ ಮೋಹನ್‌ಕುಮಾರ್‌ ಅಲಿಯಾಸ್‌ ಸೈನೈಡ್‌ ಮೋಹನ್‌ಗೆ 16ನೇ ಪ್ರಕರಣದಲ್ಲೂ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಮೋಹನ್‌ ವಿರುದ್ಧ ಒಟ್ಟು 20 ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿವೆ. ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಬೇಕೂರಿನ 33 ವರ್ಷ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಆಕೆಗೆ ಸೈನೈಡ್‌ ತಿನ್ನಿಸಿ ಕೊಲೆ ಮಾಡಿರುವ ಆರೋಪದ ಮೇಲೆ 16ನೇ ಪ್ರಕರಣ ದಾಖಲಾಗಿತ್ತು.

ಈ ಹಿಂದೆ 15 ಪ್ರಕರಣಗಳಲ್ಲಿ ಮೋಹನ್‌ಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. 16ನೇ ಪ್ರಕರಣದಲ್ಲೂ ಆತ ದೋಷಿ ಎಂದು ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶನಿವಾರ ತೀರ್ಮಾನ ಪ್ರಕಟಿಸಿತ್ತು. ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದ ನ್ಯಾಯಾಧೀಶರಾದ ಸಯೀದುನ್ನೀಸಾ ಅವರು, ಮೋಹನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದರು. ₹ 40,000 ದಂಡವನ್ನೂ ವಿಧಿಸಿದರು.

ADVERTISEMENT

ಯುವತಿಯ ಕೊಲೆ ಮಾಡಿರುವುದಕ್ಕೆ ಜೀವಾವಧಿ ಶಿಕ್ಷೆ ಮತ್ತು ₹ 25,000 ದಂಡ, ವಿಷಪ್ರಾಶನ ಮಾಡಿರುವುದಕ್ಕೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹ 5,000 ದಂಡ, ಚಿನ್ನಾಭರಣ ಸುಲಿಗೆಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ₹ 5,000 ದಂಡ, ವಂಚನೆ ಮಾಡಿರುವುದಕ್ಕೆ ಒಂದು ವರ್ಷ ಕಠಿಣ ಜೈಲು ಹಾಗೂ ಸಾಕ್ಷ್ಯ ನಾಶ ಮಾಡಿರುವುದುಕ್ಕೆ ಏಳು ವರ್ಷ ಕಠಿಣ ಜೈಲು ಮತ್ತು ₹ 5,000 ದಂಡ ವಿಧಿಸಲಾಗಿದೆ.

ಈ ಹಿಂದಿನ ಪ್ರಕರಣಗಳ ಶಿಕ್ಷೆಯನ್ನು ಅನುಭವಿಸಿದ ಬಳಿಕ 16ನೇ ಪ್ರಕರಣದ ಶಿಕ್ಷೆಯನ್ನು ಜಾರಿಗೊಳಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಮೃತ ಯುವತಿಯ ತಾಯಿಗೆ ಸಂತ್ರಸ್ತರ ಪರಿಹಾರ ನಿಧಿಯಿಂದ ಪರಿಹಾರ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.