ADVERTISEMENT

ರೌಡಿಶೀಟರ್‌ ಸಮೀರ್‌ ಅಲಿಯಾಸ್ ಕಡಪ್ಪುರ ಸಮೀರ್ ಹತ್ಯೆನಾಲ್ವರು ಆರೋಪಿಗಳ ಬಂಧನ

ಕಲ್ಲಾಪು: ಸಮೀರ್‌ ಹತ್ಯೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 2:58 IST
Last Updated 15 ಆಗಸ್ಟ್ 2024, 2:58 IST

ಉಳ್ಳಾಲ: ಇಲ್ಲಿನ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಭಾನುವಾರ ರಾತ್ರಿ ನಡೆದ ರೌಡಿಶೀಟರ್‌ ಸಮೀರ್‌ ಅಲಿಯಾಸ್ ಕಡಪ್ಪುರ ಸಮೀರ್ ಹತ್ಯೆ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಿನ್ಯದ ನಿಯಾಜ್‌ (23), ಕೃಷ್ಣಾಪುರ ಎಂಟನೇ ಬ್ಲಾಕ್‌ನ ಮೊಹಮ್ಮದ್ ನೌಷಾದ್‌ (26), ಶಕ್ತಿನಗರದ ತನ್ನೀರ್‌ ಅಲಿಯಾಸ್ ತನ್ನು (27) ಹಾಗೂ ಕಾಪುವಿನ ಮೊಹಮ್ಮದ್ ಇಕ್ಬಾಲ್‌ (28) ಬಂಧಿತರು ಎಂದು ನಗರ ಪೊಲೀಸ್ ಕಮಿಷನರ್‌ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

‘ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಸಮೀರ್‌ ಹಾಗೂ ಬಂಧಿತ ಆರೋಪಿಗಳ ನಡುವೆ ವೈರತ್ವ ಇತ್ತು.  ಆರೋಪಿ ಮೊಹಮ್ಮದ್ ನೌಷಾದ್‌ ಬಾಮೈದ ಇಲ್ಯಾಸ್‌ ಅಲಿಯಾಸ್‌ ಟಾರ್ಗೆಟ್ ಇಲ್ಯಾಸ್‌ ಹತ್ಯೆ 2018ರಲ್ಲಿ ನಗರದಲ್ಲಿ ನಡೆದಿತ್ತು. ಈ ಸಂಬಂಧ ಸಮೀರ್ ಹಾಗೂ ಇತರ ಆರೋಪಿಗಳನ್ನು ಬಂಧಿಸಲಾಗಿತ್ತು. ಇಲ್ಯಾಸ್‌ ಕೊಲೆಗೆ ಪ್ರತೀಕಾರವಾಗಿ ಸಮೀರ್‌ ಕೊಲೆ ನಡೆಸಲಾಗಿದೆ ಎಂಬ ಅಂಶ ತನಿಖೆಯಲ್ಲಿ ಗೊತ್ತಾಗಿದೆ’ ಎಂದು ತಿಳಿಸಿದ್ದಾರೆ

ADVERTISEMENT

‘ಮೊಹಮ್ಮದ್ ನೌಷಾದ್‌ ಇತರರ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿ ಅನುಷ್ಠಾನಗೊಳಿಸಿದ್ದಾನೆ. ಈ ಕೊಲೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಅಪಹರಣ, ಕೊಲೆ ಯತ್ನ, ಮಾದಕ ಪದಾರ್ಥ ಕಳ್ಳಸಾಗಣೆ ಪ್ರಕರಣಗಳಲ್ಲೂ ನೌಷಾದ್‌  ಆರೋಪಿಯಾಗಿದ್ದ. ಸುರತ್ಕಲ್‌ ಹಾಗೂ ಸಕಲೇಶಪುರ ಠಾಣೆಗಳಲ್ಲಿ ಆತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.  ತನ್ನೀರ್‌ ವಿರುದ್ಧ ಜಾನುವಾರು ಕಳ್ಳತನ ಹಾಗೂ ದರೋಡೆಗೆ ಯತ್ನ ಕುರಿತು ಈ ಹಿಂದೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ಎನ್‌. ನಾಯಕ್‌, ಉಳ್ಳಾಲ ಠಾಣೆಯ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಎಚ್‌.ಎನ್‌., ಪಿಎಸ್‌ಐ ಶೀತಲ್ ಅಲಗೂರ್‌, ಸಂತೋಷ್ ಕುಮಾರ್ ಡಿ., ಧನರಾಜ್ ಎಸ್‌. ಪ್ರಣೇಶ್ ಕುಮಾರ್ ಬಿ. ಅವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.