ADVERTISEMENT

ದಕ್ಷಿಣ ಕನ್ನಡ | ಐದು ವರ್ಷ ಮರಳಿನ ಸಮಸ್ಯೆ ಎದುರಾಗದು: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:21 IST
Last Updated 3 ಡಿಸೆಂಬರ್ 2025, 7:21 IST
ದರ್ಶನ್ ಎಚ್‌.ವಿ 
ದರ್ಶನ್ ಎಚ್‌.ವಿ    

ಮಂಗಳೂರು: ‘ಮರಳುಗಾರಿಕೆಗೆ ಹೆಚ್ಚುವರಿ ಬ್ಲಾಕ್‌ಗಳನ್ನು ಗುರುತಿಸಿ, ಅಲ್ಲೂ ಮರಳು ತೆಗೆಯಲು ಪರವಾನಗಿ ನೀಡಲು ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 52 ಕಡೆ ಮರಳು ಬ್ಲಾಕ್‌ಗಳು ಲಭ್ಯವಿದ್ದು, ಅವುಗಳಲ್ಲೆಲ್ಲ ಮರಳುಗಾರಿಕೆ ಆರಂಭವಾದ ಬಳಿಕ ಐದು ವರ್ಷ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಎದುರಾಗದು’ ಎಂದು ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ ತಿಳಿಸಿದರು.‌

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕರಾವಳಿ ನಿಯಂತ್ರಣ ವಲಯದಲ್ಲಿ ಸದ್ಯಕ್ಕಂತೂ ಮರಳುಗಾರಿಕೆಗೆ ಅವಕಾಶವಿಲ್ಲ. ಕರಾವಳಿ ನಿಯಂತ್ರಣ ವಲಯದಾಚೆ 16 ಬ್ಲಾಕ್‌ಗಳ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕೆಲ ಬ್ಲಾಕ್‌ಗಳ ಗುತ್ತಿಗೆ ಅವಧಿ ಮುಗಿದಿದ್ದು, ಅವುಗಳಿಗೂ ಶೀಘ್ರವೆ ಹೊಸ ಟೆಂಡರ್ ಕರೆಯಲಿದ್ದೇವೆ. 20 ಕಡೆ ಹೊಸ ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಅವೆಲ್ಲವೂ ಸೇರಿದರೆ 52 ಬ್ಲಾಕ್‌ಗಳಲ್ಲಿ ಮರಳುಗಾರಿಕೆಗೆ ಅವಕಾಶವಿದೆ’ ಎಂದು ಅವರು ವಿವರಿಸಿದರು. 

‘ಹಳೆಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಎರಡನೇ ಮಹಡಿಯನ್ನು ವಿಶೇಷ ಕಾರ್ಯಪಡೆಗೆ (ಎಸ್‌ಎಎಫ್‌) ಒದಗಿಸಿದ್ದೇವೆ. ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣ ನೀರು ಸರಬರಾಜು ಕಾರ್ಮಿಕ ಇಲಾಖೆಯ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರಿಸುವ ಚಿಂತನೆ ಇದೆ. ಹಳೆ ಕಚೇರಿಯ ನಿರ್ವಹಣೆ ಚೆನ್ನಾಗಿ ಆಗಬೇಕು ಎಂಬ ಕಾರಣಕ್ಕೆ ವಾರದಲ್ಲಿ ಒಂದು ದಿನ ನಾನು ಹಳೆಯ ಜಿಲ್ಲಾಧಿಕಾರಿ ಕಚೇರಿಯಲ್ಲೇ ಕಾರ್ಯನಿರ್ವಹಿಸುತ್ತೇನೆ. ಹೊಸ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮೂರನೇ ಮಹಡಿಯನ್ನು ಆರೋಗ್ಯ ಇಲಾಖೆಗೆ ಒದಗಿಸುತ್ತಿದ್ದೇವೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಕೆಂಪುಕಲ್ಲು ತೆಗೆಯಲು 59 ಪರವಾನಗಿ ನೀಡಲಾಗಿದೆ. ಇನ್ನು 12 ಅರ್ಜಿಗಳ ವಿಲೇವಾರಿ ಮಾತ್ರ ಬಾಕಿ ಇದೆ. ಪರವಾನಗಿ ಕೇಳಿ 200ಕ್ಕೂ ಹೆಚ್ಚು ಅರ್ಜಿ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ನಮಗೆ 60 ಹೊಸ ಅರ್ಜಿಗಳು ಮಾತ್ರ ಬಂದವು. ಆದರೂ ಜಿಲ್ಲಾಡಳಿತದ ಮಧ್ಯಪ್ರವೇಶದ ಬಳಿಕ ಕೆಂಪುಕಲ್ಲಿನ ದರ ನಿಯಂತ್ರಣಕ್ಕೆ ಸ್ವಲ್ಪ ಬಂದಿದೆ’ ಎಂದರು.  

‘ರಸ್ತೆ ಗುಂಡಿ ಮುಚ್ಚಲು ₹ 7 ಕೋಟಿ’

‘ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ₹ 7 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕರಾವಳಿ ವೃತ್ತದಿಂದ ಮಹಾವೀರ ವೃತ್ತದ (ಪಂಪ್‌ವೆಲ್‌) ವರೆಗಿನ ರಸ್ತೆಯೂ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಶೀಘ್ರವೇ ದುರಸ್ತಿ ಆಗಲಿವೆ’ ಎಂದು ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ದರ್ಶನ್ ಎಚ್‌.ವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.