ADVERTISEMENT

ಮಂಗಳೂರು | ಸಂಜೀವಿನಿ ಮಾರ್ಟ್; ಮಹಿಳೆಯರ ‘ಅಸ್ಮಿತೆ’

ಒಂದು ತಿಂಗಳಲ್ಲಿ ಕಾರ್ಯಾರಂಭ, ಗ್ರಾಮೀಣ ಗೃಹ ಉತ್ಪನ್ನಗಳು ಸುಲಭದಲ್ಲಿ ಲಭ್ಯ

ಸಂಧ್ಯಾ ಹೆಗಡೆ
Published 2 ಆಗಸ್ಟ್ 2025, 7:07 IST
Last Updated 2 ಆಗಸ್ಟ್ 2025, 7:07 IST
ಅಸ್ಮಿತೆ
ಅಸ್ಮಿತೆ   

ಮಂಗಳೂರು: ವಾಣಿಜ್ಯ ಸೂಪರ್ ಮಾರ್ಕೆಟ್‌ಗಳಿಗೆ ಸ್ಪರ್ಧಿಯಾಗಿ ದೇಸಿ ಸೊಗಡಿನ ‘ಅಸ್ಮಿತೆ’ ಸಂಜೀವಿನಿ ಮಾರ್ಟ್‌ ಅನ್ನು ನಗರದ ಹೃದಯಭಾಗದಲ್ಲಿ ತೆರೆಯಲು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ.

ಸರ್ಕಾರದ ಹಲವಾರು ಯೋಜನೆಗಳು ಗ್ರಾಮೀಣ ಮಹಿಳೆಯರಲ್ಲಿ ಸ್ವ ಉದ್ಯೋಗದ ಪರಿಕಲ್ಪನೆ ಬಿತ್ತಿದ ಪರಿಣಾಮವಾಗಿ, ಕುಟುಂಬ ನಿರ್ವಹಣೆಗೆ ಸೀಮಿತವಾಗಿದ್ದ ಮಹಿಳೆಯರು, ಹೊಸಿಲಾಚೆ ಹೆಜ್ಜೆ ಇಟ್ಟಿದ್ದಾರೆ. ನೂರಾರು ಸ್ತ್ರೀಯರು ಸಂಘ ಕಟ್ಟಿಕೊಂಡು ಗೃಹ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಮೇಳಗಳು, ವಿಶೇಷ ಸಂತೆಗಳೇ ಆಸರೆಯಾಗಿದ್ದ ಈ ಉತ್ಪನ್ನಗಳಿಗೆ, ಕಾಯಂ ಮಾರುಕಟ್ಟೆ ಕಲ್ಪಿಸುವ ಉದ್ದೇಶದೊಂದಿಗೆ ಸಂಜೀವಿನಿ ಮಾರ್ಟ್ ರೂಪುಗೊಂಡಿದೆ.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ರಚನೆಯಾಗಿರುವ ಸಂಜೀವಿನಿ ಸ್ವ ಸಹಾಯ ಸಂಘಗಳ ಮಹಿಳೆಯರು ತಯಾರಿಸುವ ಉತ್ಪನ್ನಗಳು ‘ಅಸ್ಮಿತೆ’ ಮಾರ್ಟ್‌ನಲ್ಲಿ ಲಭ್ಯವಾಗಲಿವೆ. ತಾಲ್ಲೂಕು ಪಂಚಾಯಿತಿ ಕಟ್ಟಡದ ಆವರಣದಲ್ಲಿ ಆಗಸ್ಟ್‌ನಲ್ಲಿ ಮಾರ್ಟ್ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿ, ಸೆಪ್ಟೆಂಬರ್‌ನಲ್ಲಿ ಕಾರ್ಯಾರಂಭಿಸಲಿದೆ.

ADVERTISEMENT

ಏನೇನು ಉತ್ಪನ್ನಗಳು?: ಕಾಡು ಜೇನುತುಪ್ಪ, ಬುಟ್ಟಿ, ಮುಟ್ಟಾಳೆ, ಗರಿಯ ಚಾಪೆ, ಕುಡುಪು ತೆರಿಯ, ಗೆರಟೆಯ ಆಲಂಕಾರಿಕ ವಸ್ತುಗಳು, ಕೋಕಂ, ತಾಜಾ ತರಕಾರಿ, ನಾಟಿ ಕೋಳಿ ಮೊಟ್ಟೆ, ಉಪ್ಪಿನಕಾಯಿ, ತುಪ್ಪ, ಬಟ್ಟೆ ಚೀಲ, ಹರ್ಬಲ್ ಸೋಪ್, ಮನೆಯಲ್ಲೇ ತಯಾರಿಸಿದ ಫಿನೈಲ್, ಕೋರಿ ರೊಟ್ಟಿ, ಬೇಕರಿ ತಿನಿಸುಗಳು, ಶುದ್ಧ ಕೊಬ್ಬರಿ ಎಣ್ಣೆ, ಹಾಳೆ ತಟ್ಟೆ, ಬಣ್ಣದ ಮೇಣದ ಬತ್ತಿ, ಮಣ್ಣಿನ ಆಕರ್ಷಕ ವಸ್ತುಗಳು ಸೇರಿದಂತೆ 172ಕ್ಕೂ ಹೆಚ್ಚು ಉತ್ಪನ್ನಗಳು ಮಾರ್ಟ್‌ನಲ್ಲಿ ಇರಲಿವೆ.

ಕಾರ್ಯ ನಿರ್ವಹಣೆ ಹೇಗೆ?: ಸ್ವ ಸಹಾಯ ಸಂಘಗಳ ಸದಸ್ಯರಿಗಾಗಿಯೇ ರಚನೆಯಾಗಿರುವ ಮಾರ್ಟ್‌ನ ನಿರ್ವಹಣೆಯನ್ನೂ ಕ್ರಿಯಾಶೀಲವಾಗಿರುವ ಜಿಲ್ಲೆಯ ಯಾವುದಾದರೊಂದು ಸ್ವ ಸಹಾಯ ಸಂಘ ನೋಡಿಕೊಳ್ಳಲಿದೆ. ಬೇರೆ ಬೇರೆ ಸಂಘಗಳು ತಂದು ಕೊಡುವ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಿ, ಲಾಭವನ್ನು ಆಯಾ ಸಂಘಕ್ಕೆ ಸಂದಾಯ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸರ್ಕಾರಿ ಇಲಾಖೆಗಳ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ ಬದಲಾಗಿ ಗ್ರಾಮೀಣ ಜನರು ತಯಾರಿಸುವ ಗೃಹ ಉತ್ಪನ್ನಗಳನ್ನು ಒಳಗೊಂಡ ‘ಗಿಫ್ಟ್ ಬಾಸ್ಕೆಟ್‌’ ಕೂಡ ಈ ಮಾರ್ಟ್‌ನಲ್ಲಿ ದೊರೆಯುತ್ತದೆ. ಸರ್ಕಾರಿ ಅಥವಾ ಖಾಸಗಿ ಕಾರ್ಯಕ್ರಮ ಸಂಘಟಕರು ಇಲ್ಲಿಂದ ಗಿಫ್ಟ್ ಬಾಸ್ಕೆಟ್‌ಗಳನ್ನು ಖರೀದಿಸಿ, ಗ್ರಾಮೀಣ ಮಹಿಳೆಯರನ್ನು ಪ್ರೋತ್ಸಾಹಿಸಬಹುದು ಎನ್ನುತ್ತಾರೆ ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಗೌಡ.

ಮನೆಯಲ್ಲಿ ತಯಾರಿಸಿದ, ರಾಸಾಯನಿಕರಹಿತ ವಸ್ತುಗಳು ಇಲ್ಲಿನ ವಿಶೇಷತೆ. ಎಫ್‌ಎಸ್‌ಎಸ್‌ಎಐ, ಎಂಎಸ್‌ಎಂಸಿ ಪ್ರಮಾಣ ಪತ್ರ ಹೊಂದಿರುವ ಉತ್ಪನ್ನಗಳಿಗೆ ಮಾತ್ರ ಅವಕಾಶ ಇರುತ್ತದೆ. ವಿಶ್ವಾಸಾರ್ಹತೆ, ತೂಕ, ಗುಣಮಟ್ಟ ಕಾಯ್ದುಕೊಳ್ಳುವಂತೆ ಎಲ್ಲ ಸಂಘಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಹೊರಜಿಲ್ಲೆ ಉತ್ಪನ್ನಗಳಿಗೂ ಅವಕಾಶ

ದಕ್ಷಿಣ ಕನ್ನಡ ಜಿಲ್ಲೆಯ ಉತ್ಪನ್ನಗಳ ಜೊತೆಗೆ ಸ್ಥಳೀಯವಾಗಿ ಲಭ್ಯವಿರದ ಹೊರಜಿಲ್ಲೆಗಳ ವಿಶೇಷ ಉತ್ಪನ್ನಗಳೂ ಈ ಮಾರ್ಟ್‌ನಲ್ಲಿ ಸ್ಥಾನ ಪಡೆಯಲಿವೆ. ಬೇರೆ ಜಿಲ್ಲೆಗಳ ಸಂಜೀವಿನಿ ಸದಸ್ಯರು ತಯಾರಿಸಿದ ಸಾಮಗ್ರಿಗಳನ್ನು ತುಳುನಾಡಿಗೆ ದೊರಕಿಸಿ ಕೊಡುವ ಮೂಲಕ ‘ಅಸ್ಮಿತೆ ಮಾರ್ಟ್' ಜಿಲ್ಲೆಗಳ ನಡುವೆ ಸಂಬಂಧ ಬೆಸೆಯಲಿದೆ.

‘ಗೋದಾಮು ನಿರ್ಮಾಣ ಯೋಜನೆ’

ಸ್ವ ಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ದಾಸ್ತಾನು ಮಾಡಲು ಗೋದಾಮು ನಿರ್ಮಾಣ ಮಾಡುವ ಯೋಜನೆ ಇದೆ. ಇದಕ್ಕೆ ಸಿಎಸ್‌ಆರ್‌ ನೆರವು ಪಡೆಯಲು ಪ್ರಯತ್ನಿಸಲಾಗುವುದು. ಗೋದಾಮು ನಿರ್ಮಾಣವಾದ ಮೇಲೆ ಮುಂದಿನ ದಿನಗಳಲ್ಲಿ ಆನ್‌ಲೈನ್‌ ಮಾರುಕಟ್ಟೆ ಒದಗಿಸಲು ಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನಾಯಕ್ ನರ್ವಾಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.